ನವದೆಹಲಿ: ಇಂದು ಭಾರತವು 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಕಳೆದ 8 ವರ್ಷಗಳಲ್ಲಿ ಕೈಗೊಂಡ ಸುಧಾರಣೆಗಳಿಂದಾಗಿ ಈ ಸಾಧನೆ ಮಾಡಿದ್ದೇವೆ. ನಮ್ಮ ಕರ್ಮಯೋಗಿಗಳ ಶ್ರಮದಿಂದ ಸರ್ಕಾರಿ ಇಲಾಖೆಗಳ ದಕ್ಷತೆ ಹೆಚ್ಚಾಗಿದೆ. ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬೇಕೆಂಬ ಸಂಕಲ್ಪವನ್ನು ಈಡೇರಿಸಲು ನಾವು ಸ್ವಾವಲಂಬಿ ಭಾರತದ ಹಾದಿಯಲ್ಲಿ ಮುನ್ನಡೆಯುತ್ತಿದ್ದೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ರೋಜ್ಗಾರ್ ಮೇಳಕ್ಕೆ ಇಂದು ಚಾಲನೆ ನೀಡಿದ್ದಾರೆ. 10 ಲಕ್ಷ ಸಿಬ್ಬಂದಿಯನ್ನು ನೇಮಕಾತಿ ಮಾಡುವ ಅಭಿಯಾನ ಇದಾಗಿದೆ. ಈ ಸಮಾರಂಭದಲ್ಲಿ ಮೊದಲ ಹಂತದಲ್ಲಿ ಹೊಸದಾಗಿ ಸೇರ್ಪಡೆಗೊಂಡ 75 ಸಾವಿರ ಮಂದಿಗೆ ಇಂದು ನೇಮಕಾತಿ ಪತ್ರ ವಿತರಿಸಲಾಗುತ್ತದೆ.
Addressing the Rozgar Mela where appointment letters are being handed over to the newly inducted appointees. https://t.co/LFD3jHYNIn
— Narendra Modi (@narendramodi) October 22, 2022
ಹಾಗೇ, ರೋಜ್ಗಾರ್ ಮೇಳದ ಪ್ರಯುಕ್ತ ವಿವಿಧ ಸರ್ಕಾರಿ ಉದ್ಯೋಗಗಳಿಗೆ ಆಯ್ಕೆಯಾದ ಕೆಲವು ಅಭ್ಯರ್ಥಿಗಳಿಗೆ ಕೇಂದ್ರ ಸಚಿವರು ದೇಶಾದ್ಯಂತ ವಿವಿಧ ಭಾಗಗಳಲ್ಲಿ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಿದ್ದಾರೆ. ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಮತ್ತು ನಾಗರಿಕರ ಕಲ್ಯಾಣವನ್ನು ಖಾತ್ರಿಪಡಿಸುವ ಪ್ರಧಾನ ಮಂತ್ರಿಯವರ ನಿರಂತರ ಬದ್ಧತೆಯನ್ನು ಪೂರೈಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಕೇಂದ್ರ ರಕ್ಷಣಾ ಇಲಾಖೆ, ರೈಲ್ವೆ ಇಲಾಖೆ, ಅಂಚೆ, ಗೃಹ ಇಲಾಖೆ, ಕಾರ್ಮಿಕ ಇಲಾಖೆ, ಸಿಬಿಐ, ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗಿಗಳಿಗೆ ನೇಮಕಾತಿ ಪತ್ರ ನೀಡಲಾಗುತ್ತದೆ. ಇಂದು ನೇಮಕಗೊಂಡವರು ಎ, ಬಿ ಮತ್ತು ಸಿ ಹಂತಗಳಲ್ಲಿ ಸರ್ಕಾರಕ್ಕೆ ಸೇರುತ್ತಾರೆ. ನೇಮಕಾತಿಗಳನ್ನು ಮಾಡಲಾಗುತ್ತಿರುವ ಹುದ್ದೆಗಳಲ್ಲಿ ಕೇಂದ್ರ ಸಶಸ್ತ್ರ ಪಡೆ ಸಿಬ್ಬಂದಿ, ಸಬ್ ಇನ್ಸ್ಪೆಕ್ಟರ್, ಕಾನ್ಸ್ಟೇಬಲ್, ಎಲ್ಡಿಸಿ, ಸ್ಟೆನೋ, ಪಿಎ, ಆದಾಯ ತೆರಿಗೆ ಇನ್ಸ್ಪೆಕ್ಟರ್ಗಳು ಮತ್ತು ಎಂಟಿಎಸ್ ಕೂಡ ಸೇರಿವೆ.