ನವದೆಹಲಿ: ರಾಷ್ಟ್ರೀಯ ಔಷಧೀಯ ಬೆಲೆ ನಿಗದಿ ಪ್ರಾಧಿಕಾರವು (NPPA) ವಿಟಮಿನ್ ಡಿ3 ಓರಲ್ ಸೊಲ್ಯೂಷನ್, ಕ್ಯಾಲ್ಸಿಯಂ ಪೂರಕಗಳು, ಮಧುಮೇಹ ನಿರೋಧಕ ಔಷಧಗಳು, ಹೃದಯ ಸಂಬಂಧಿ ಮತ್ತು ಅಂಗಾಂಟಿ ಕಸಿ ನಂತರ ನೀಡುವ ಇಮ್ಯುನೊಸಪ್ರೆಸೆಂಟ್ ಚಿಕಿತ್ಸೆಗಳೂ ಸೇರಿದಂತೆ ಒಟ್ಟು 30 ಔಷಧೀಯ ಸಂಯೋಜನೆಗಳ ಚಿಲ್ಲರೆ ಬೆಲೆಯನ್ನು ನಿಗದಿಪಡಿಸಿದೆ.
ರಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಔಷಧೀಯ ಇಲಾಖೆಯು ಹೊರಡಿಸಿದ ಈ ಆದೇಶವು, ‘ಔಷಧಗಳ (ಬೆಲೆ ನಿಯಂತ್ರಣ) ಆದೇಶ (DPCO), 2013’ರ ಅಡಿಯಲ್ಲಿ ಬಂದಿದೆ. ಇವುಗಳನ್ನು ‘ಹೊಸ ಔಷಧಗಳು’ ಎಂದು ವರ್ಗೀಕರಿಸಲಾಗಿದ್ದು, ಪಟ್ಟಿಯಲ್ಲಿರುವ ತಯಾರಕರು ಮತ್ತು ಮಾರುಕಟ್ಟೆ ಕಂಪನಿಗಳಿಗೆ ಈ ದರಗಳು ಅನ್ವಯವಾಗುತ್ತವೆ.
ಪ್ರಮುಖ ಔಷಧಗಳು ಮತ್ತು ನಿಗದಿತ ಬೆಲೆಗಳು:
ವಿಟಮಿನ್ ಪೂರಕಗಳು: ವಿಟಮಿನ್ ಡಿ3 ಓರಲ್ ಸೊಲ್ಯೂಷನ್ (Cholecalciferol 60,000 IU – Nano Droplet) ಪ್ರತಿ ಮಿಲಿಗೆ ₹14.91. ಜೊತೆಗೆ ಮೂಳೆ ಆರೋಗ್ಯ, ವಿಟಮಿನ್ ಕೊರತೆ ಮತ್ತು ನರರೋಗಗಳಿಗೆ ಬಳಸುವ ಇತರ ಕ್ಯಾಲ್ಸಿಯಂ ಮತ್ತು ವಿಟಮಿನ್ ಮಿಶ್ರಿತ ಔಷಧಗಳ ದರಗಳನ್ನೂ ನಿಗದಿಪಡಿಸಲಾಗಿದೆ.
ದೀರ್ಘಕಾಲೀನ ಕಾಯಿಲೆಗಳು:
ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ (Atorvastatin & Fenofibrate) ಪ್ರತಿ ಮಾತ್ರೆಗೆ ₹18.46.
ಅಲರ್ಜಿ ಚಿಕಿತ್ಸೆಗೆ (Bilastine & Montelukast) ಪ್ರತಿ ಮಾತ್ರೆಗೆ ₹21.22.
ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗೆ (Bisoprolol & Amlodipine) ಪ್ರತಿ ಮಾತ್ರೆಗೆ ₹9.40.
ಮಧುಮೇಹ ನಿಯಂತ್ರಣ: ಎಂಪಾಗ್ಲಿಫ್ಲೋಜಿನ್, ಸಿಟಾಗ್ಲಿಪ್ಟಿನ್ ಮತ್ತು ಮೆಟ್ಫಾರ್ಮಿನ್ ಮಿಶ್ರಿತ ಮಾತ್ರೆಗೆ ₹14.88 ಮತ್ತು ಸಿಟಾಗ್ಲಿಪ್ಟಿನ್, ಗ್ಲಿಮೆಪಿರೈಡ್ ಹಾಗೂ ಮೆಟ್ಫಾರ್ಮಿನ್ ಮಾತ್ರೆಗೆ ₹11.91 ದರ ನಿಗದಿಪಡಿಸಲಾಗಿದೆ.
ಅಂಗಾಂಗ ಕಸಿ ಚಿಕಿತ್ಸೆ: ಟ್ಯಾಕ್ರೋಲಿಮಸ್ (Tacrolimus) 3 mg ಕ್ಯಾಪ್ಸೂಲ್ನ ಬೆಲೆಯನ್ನು ಪ್ರತಿ ಕ್ಯಾಪ್ಸೂಲ್ಗೆ ₹127 ಎಂದು ನಿಗದಿಪಡಿಸಲಾಗಿದೆ.








