ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದು, ಇದೀಗ ಅವರ ತಂದೆ ಎಚ್ಡಿ ರೇವಣ್ಣ ಅವರು ಪುತ್ರನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನಲ್ಲಿ ಕಾನೂನು ತಜ್ಞರ ಸಲಹೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.
ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ಹೊಳೆನರಸೀಪುರ ಶಾಸಕ ಎಚ್ ಡಿ ರೇವಣ್ಣ ಅವರು ನಿನ್ನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಜಾಮೀನು ಪಡೆದುಕೊಂಡು ಬಿಡುಗಡೆಯಾಗಿದ್ದಾರೆ. ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ವಿಚಾರಣೆ ನಂತರ ಎಚ್ ಡಿ ರೇವಣ್ಣ ಅವರಿಗೆ ಕೋರ್ಟ್ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಬಿಡುಗಡೆಯಾದ ಬೆನ್ನಲ್ಲೇ ಮೊದಲು ಬೆಂಗಳೂರಿನಲ್ಲಿ ಪದ್ಮನಾಭನಗರದಲ್ಲಿರುವ ತಂದೆ ಎಸ್‌ಡಿ ದೇವೇಗೌಡ ಹಾಗೂ ಕುಟುಂಬಸ್ಥರನ್ನು ಭೇಟಿಯಾದರು. ತದನಂತರ ಟೆಂಪಲ್ ರನ್ ಮಾಡಿರುವ ಎಚ್ ಡಿ ರೇವಣ್ಣ ಅವರು ಸ್ಥಳೀಯ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜಿ ಸಲ್ಲಿಸಿದರು. ನಂತರ ಮೈಸೂರಿಗೆ ಭೇಟಿ ನೀಡಿ ಚಾಮುಂಡೇಶ್ವರಿ ತಾಯಿ ಸನ್ನಿಧಿಯಲ್ಲಿ ಮಗ ಪ್ರಜ್ವಲ್ ರೇವಣ್ಣ ಹೆಸರಿನಲ್ಲಿ ಹಾಗೂ ಕುಟುಂಬದ ಎಲ್ಲಾ ಸದಸ್ಯರ ನಕ್ಷತ್ರ, ಹೆಸರಿನಲ್ಲಿ ಪೂಜೆ ಸಲ್ಲಿಸಿದ್ದಾರೆ.
ನಿನ್ನೆ ಬಿಡುಗಡೆಯಾದ ನಂತರ ಅವರು ಇಂದು ಹಾಸನಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು.ಆದರೆ ಇದೀಗ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಇರಲಿದು ಕಾನೂನು ತಜ್ಞರ ಸಲಹೆ ಪಡೆಯಲಿದ್ದಾರೆ.ಹಾಗಾಗಿ ಏಕಾಏಕಿ ಹಾಸನ ಪ್ರವಾಸ ರದ್ದು ಗೊಳಿಸಿದ್ದಾರೆ ಎಂದು ಜೆಡಿಎಸ್ ವಕ್ತಾರ ರಘು ಬಂಗೇರ ಅವರು ತಿಳಿಸಿದ್ದಾರೆ.