ಮಂಡ್ಯ : ನಗರದ ಕಲ್ಲಹಳ್ಳಿ ವಿ.ವಿ. ನಗರದ ಖಾಲಿ ನಿವೇಶನದ ಪೊದೆಯೊಂದರಲ್ಲಿ ಬುಧವಾರ ರಾತ್ರಿ ಮುಳ್ಳು ಹಂದಿಗಳು ಕಾಣಿಸಿಕೊಂಡಿದ್ದು, ನಗರದ ಜನತೆಯಲ್ಲಿ ಆತಂಕ ಸೃಷ್ಟಿಸಿದೆ.
ವಿ.ವಿ. ನಗರದ 23ನೇ ಕ್ರಾಸ್ನಲ್ಲಿ ಮುಳ್ಳುಹಂದಿಗಳು ಕಾಣಿಸಿಕೊಂಡಿದ್ದವು. ಇದನ್ನು ನೋಡಿದ ಸಾರ್ವಜನಿಕರು ಅರಣ್ಯ ಇಲಾಖೆ ಹಾಗೂ ನಗರಸಭೆ ಸಿಬ್ಬಂದಿಗೆ ತಕ್ಷಣ ಮಾಹಿತಿ ನೀಡಿದ್ದಾರೆ.
ರಾತ್ರಿ 11ರ ಸಮಯದಲ್ಲಿ ಪೊದೆಯಲ್ಲಿ ಎರಡು ಮುಳ್ಳು ಹಂದಿಗಳು ಅವಿತು ಕುಳಿತಿದ್ದವು. ಸ್ಥಳೀಯರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳು ಬಲೆಯನ್ನು ಬಳಸಿ ಒಂದು ಮುಳ್ಳುಹಂದಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮತ್ತೊಂದು ಮುಳ್ಳು ಹಂದಿ ತಪ್ಪಿಸಿಕೊಂಡು ಹೋಗಿದೆ.
ಕಳೆದ ಕೆಲ ದಿನಗಳ ಹಿಂದೆಯೂ ನಗರದ ತಾವರೆಗೆರೆ ಬಡಾವಣೆಯ ಬಚ್ಚಲು ಮನೆಯೊಂದರಲ್ಲಿ ಮುಳ್ಳುಹಂದಿಯೊಂದು ಕಾಣಿಸಿಕೊಂಡಿತ್ತು. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮುಳ್ಳುಹಂದಿಯನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದರು.
ಮಾರನೇ ದಿನ ಅಶೋಕನಗರದ ಜೋಡಿರಸ್ತೆಯಲ್ಲೂ ಸಹ ರಾತ್ರಿ 10 ಗಂಟೆ ಸಮಯದಲ್ಲಿ ರಾಜಾರೋಷವಾಗಿ ರಸ್ತೆಯಲ್ಲಿ ಮುಳ್ಳುಹಂದಿಗಳು ಓಡಾಡುತ್ತಿದ್ದವು. ಇದನ್ನು ಕಂಡ ಸಾರ್ವಜನಿಕರ ಗಲಾಟೆಯಿಂದ ಆತಂಕಗೊಂಡ ಮುಳ್ಳುಹಂದಿ ಚರಂಡಿಯೊಳಗೆ ಹೋಗಿ ಅವಿತುಕೊಂಡಿತ್ತು. ಕತ್ತಲಲ್ಲಿ ಮರೆಯಾದ ಮುಳ್ಳುಹಂದಿಗಾಗಿ ಹುಡುಕಾಟ ನಡೆಸಿದ್ದರು ಪತ್ತೆಯಾಗಿರಲಿಲ್ಲ.
ಇದೀಗ ಕಲ್ಲಹಳ್ಳಿಯ ವಿ.ವಿ. ನಗರ ಬಡಾವಣೆಯಲ್ಲಿ ಎರಡು ಮುಳ್ಳುಹಂದಿಗಳು ಕಾಣಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಆತಂಕ ಸೃಷ್ಟಿಸಿದೆ. ನಗರಸಭೆ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ನಿವೇಶನಗಳನ್ನು ಸ್ವಚ್ಚವಾಗಿಟ್ಟುಕೊಳ್ಳದೇ ಇರುವುದೇ ವನ್ಯಜೀವಿಗಳು ಅರಣ್ಯದಿಂದ ನಗರ ಪ್ರದೇಶಗಳತ್ತ ಬರುತ್ತಿವೆ. ನಗರಸಭೆ ಅಧಿಕಾರಿಗಳು ಖಾಲಿ ನಿವೇಶನಗಳ ಮಾಲೀಕರಿಗೆ ನೋಟೀಸ್ ನೀಡಿ ಗಿಡ ಗಂಟಿಗಳನ್ನು ಕಿತ್ತುಹಾಕಿ ಸ್ವಚ್ಚವಾಗಿಟ್ಟುಕೊಳ್ಳುವಂತೆ ತಾಕೀತು ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.