ನವದೆಹಲಿ: ಕೊನೆಯ ಹಂತದ ಮತದಾನಕ್ಕೆ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೇ 30 ರಂದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಪ್ರಸಿದ್ಧ ವಿವೇಕಾನಂದ ರಾಕ್ ಮೆಮೋರಿಯಲ್ ಗೆ ಆಧ್ಯಾತ್ಮಿಕ ಪ್ರವಾಸಕ್ಕಾಗಿ ಭೇಟಿ ನೀಡಲಿದ್ದಾರೆ.
ಬಿಜೆಪಿಯ ಹಿರಿಯ ನಾಯಕರೊಬ್ಬರು ಮಂಗಳವಾರ ಈ ಮಾಹಿತಿಯನ್ನು ನೀಡಿದ್ದಾರೆ. ಕನ್ಯಾಕುಮಾರಿ ದಡದಲ್ಲಿರುವ ಸಮುದ್ರದ ಮಧ್ಯದಲ್ಲಿರುವ ತಮಿಳು ಸಂತ ತಿರುವಳ್ಳುವರ್ ಅವರ ಏಕಶಿಲಾ ಪ್ರತಿಮೆಯ ಬಳಿ ಇರುವ ಸುಂದರವಾದ ವಿಆರ್ಎಂಗೆ ಪ್ರಧಾನಿ ಗುರುವಾರ ಸಂಜೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ. ನಂತರ ಅವರು ಜೂನ್ 1 ರಂದು ದೆಹಲಿಗೆ ತೆರಳಲಿದ್ದಾರೆ. “ಅವರ ಭೇಟಿಗೂ ಪಕ್ಷಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಬಿಜೆಪಿ ನಾಯಕ ಹೇಳಿದರು. ’
ಪ್ರಧಾನಿ ಮೋದಿ ಕಾರ್ಯಕ್ರಮ ಹೇಗಿರಲಿದೆ?: ಮೇ 30 ರಿಂದ ಜೂನ್ 1 ರವರೆಗೆ ಪ್ರಧಾನಿ ಮೋದಿ ಕನ್ಯಾಕುಮಾರಿಗೆ ಭೇಟಿ ನೀಡಲಿದ್ದಾರೆ. ಮೇ 30 ರ ಸಂಜೆಯಿಂದ ಜೂನ್ 1 ರ ಸಂಜೆಯವರೆಗೆ ಪ್ರಧಾನಿ ಮೋದಿ ವಿವೇಕಾನಂದ ರಾಕ್ ಮೆಮೋರಿಯಲ್ ನಲ್ಲಿ ಧ್ಯಾನ ಮಾಡಲಿದ್ದಾರೆ. ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಶಿಲಾ ಸ್ಮಾರಕದ ಅದೇ ಕಲ್ಲಿನ ಮೇಲೆ ಅವರು ಧ್ಯಾನ ಮಾಡಲಿದ್ದಾರೆ. ಅಧಿಕೃತ ಕಾರ್ಯಕ್ರಮದ ಪ್ರಕಾರ, ಇದಕ್ಕೂ ಮೊದಲು, ಪಿಎಂ ಮೋದಿ ಮೇ 30 ರಂದು ಬೆಳಿಗ್ಗೆ 11 ಗಂಟೆಗೆ ಹೋಶಿಯಾರ್ಪುರದಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.