ನವದೆಹಲಿ: ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಗೆ ಇಂದಿಗೆ (ಏಪ್ರಿಲ್ 22, 2026) ಒಂದು ವರ್ಷ ತುಂಬಿದೆ. ಈ ಸಂದರ್ಭದಲ್ಲಿ ದಾಳಿಯಲ್ಲಿ ಮೃತರಾದ 26 ಅಮಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. “ಭಾರತವು ಯಾವುದೇ ರೂಪದ ಭಯೋತ್ಪಾದನೆಗೆ ಎಂದಿಗೂ ತಲೆಬಾಗುವುದಿಲ್ಲ” ಎಂದು ಅವರು ಈ ಸಂದರ್ಭದಲ್ಲಿ ದೃಢವಾದ ಸಂದೇಶ ರವಾನಿಸಿದ್ದಾರೆ.
ಪ್ರಧಾನಿಯವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಬಗ್ಗೆ ಹಂಚಿಕೊಂಡಿದ್ದು, ಸಂತ್ರಸ್ತ ಕುಟುಂಬಗಳ ನೋವಿನಲ್ಲಿ ಇಡೀ ದೇಶವೇ ಭಾಗಿಯಾಗಿದೆ ಎಂದು ಹೇಳಿದ್ದಾರೆ.
”ಕಳೆದ ವರ್ಷ ಇದೇ ದಿನ ಪಹಲ್ಗಾಮ್‌ನಲ್ಲಿ ನಡೆದ ಕ್ರೂರ ಭಯೋತ್ಪಾದನಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಅಮಾಯಕರನ್ನು ಸ್ಮರಿಸುತ್ತಿದ್ದೇನೆ. ಆ ಬಲಿದಾನಗಳನ್ನು ದೇಶ ಎಂದಿಗೂ ಮರೆಯುವುದಿಲ್ಲ. ಭಯೋತ್ಪಾದಕರ ಹೇಡಿ ಕೃತ್ಯಗಳು ನಮ್ಮನ್ನು ಎಂದಿಗೂ ಎದೆಗುಂದಿಸಲಾರವು. ಭಾರತವು ಒಗ್ಗಟ್ಟಿನಿಂದ ನಿಂತು ಇಂತಹ ಶಕ್ತಿಗಳನ್ನು ಮಟ್ಟಹಾಕಲಿದೆ.” ಎಂದು ಪ್ರಧಾನಿ ಮೋದಿ ಬರೆದಿದ್ದಾರೆ.
ಕಳೆದ ವರ್ಷ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಭಯೋತ್ಪಾದಕರು ಪ್ರವಾಸಿಗರನ್ನು ಧರ್ಮದ ಆಧಾರದ ಮೇಲೆ ಪ್ರತ್ಯೇಕಿಸಿ ಗುಂಡಿಕ್ಕಿದ್ದರು. ಈ ಘಟನೆಯಲ್ಲಿ 25 ಪ್ರವಾಸಿಗರು ಮತ್ತು ಒಬ್ಬ ಸ್ಥಳೀಯ ನಿವಾಸಿ ಸೇರಿದಂತೆ ಒಟ್ಟು 26 ಮಂದಿ ಸಾವನ್ನಪ್ಪಿದ್ದರು.








