ನವದೆಹಲಿ: ಬ್ರೆಜಿಲ್‌ನಲ್ಲಿ ನಡೆದ ಪ್ರತಿಷ್ಠಿತ ‘ಮುಂಡಿಯಲ್ ದೋ ಕ್ವಿಜೊ ದೋ ಬ್ರೆಜಿಲ್’ (ವಿಶ್ವ ಚೀಸ್ ಚಾಂಪಿಯನ್‌ಶಿಪ್) 2026ರ ಕ್ರೀಡಾಕೂಟದಲ್ಲಿ ಭಾರತದ ಆರ್ಟಿಸಾನಲ್ ಚೀಸ್ (Artisanal Cheese) ತಯಾರಕರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಜಾಗತಿಕ ಸ್ಪರ್ಧೆಯಲ್ಲಿ ಭಾರತ ಮೊದಲ ಬಾರಿಗೆ ಭಾಗವಹಿಸಿ ಒಂದು ‘ಸೂಪರ್ ಗೋಲ್ಡ್’ ಸೇರಿದಂತೆ ಒಟ್ಟು ನಾಲ್ಕು ಪದಕಗಳನ್ನು ಮುಡಿಗೇರಿಸಿಕೊಂಡಿದೆ. ಭಾರತದ ಈ ಅಸಾಧಾರಣ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಹಾಗೂ ಸಾಮಾಜಿಕ ಜಾಲತಾಣ ಎಕ್ಸ್ (X) ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, “ಭಾರತದ ಚೀಸ್ ಜಾಗತಿಕ ಮಟ್ಟದಲ್ಲಿ ತನ್ನ ಛಾಪು ಮೂಡಿಸುತ್ತಿದೆ. ಈ ಸಾಧನೆಯು ನಮ್ಮ ದೇಶದ ಡೈರಿ ವಲಯದ ಸಾಮರ್ಥ್ಯ ಮತ್ತು ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ. ಭಾರತದ ರುಚಿ ಇಂದು ಜಗತ್ತಿನಾದ್ಯಂತ ತಲುಪುತ್ತಿದೆ,” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ಭಾರತದ ತಯಾರಕರು ಒಟ್ಟು 1 ಸೂಪರ್ ಗೋಲ್ಡ್, 2 ಚಿನ್ನ ಮತ್ತು 1 ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ:
ಸೂಪರ್ ಗೋಲ್ಡ್ (Super Gold): ಮುಂಬೈ ಮೂಲದ ‘ಎಲಿಫ್ಥೆರಿಯಾ ಗುಲ್ಮಾರ್ಗ್’ (ಬ್ರೀ ಶೈಲಿಯ ಚೀಸ್) ಅತ್ಯುನ್ನತ ಗೌರವಕ್ಕೆ ಪಾತ್ರವಾಗಿದೆ.
ಚಿನ್ನದ ಪದಕ (Gold): ಲಡಾಖ್‌ನ ಲೇಹ್ ಮೂಲದ ನಾರ್ಡಿಕ್ ಫಾರ್ಮ್ ತಯಾರಿಸಿದ ‘ಯಾಕ್ ಚುರ್ಪಿ-ಸಾಫ್ಟ್’ (ಯಾಕ್ ಪ್ರಾಣಿಯ ಹಾಲಿನಿಂದ ತಯಾರಿಸಿದ್ದು) ಮತ್ತು ‘ಎಲಿಫ್ಥೆರಿಯಾ ಬ್ರುನೋಸ್ಟ್’ ಚೀಸ್‌ಗಳಿಗೆ ಚಿನ್ನದ ಪದಕ ಸಂದಿದೆ.
ಬೆಳ್ಳಿ ಪದಕ (Silver): ‘ಎಲಿಫ್ಥೆರಿಯಾ ಕಾಲಿ ಮಿರಿ’ (ಮೆಣಸಿನ ರುಚಿಯ ಚೀಸ್) ಬೆಳ್ಳಿ ಪದಕ ಗೆದ್ದುಕೊಂಡಿದೆ.








