ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದವರು ಬರೆದ ಪತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ( Prime Minister Narendra Modi ) ಅವರು ಉತ್ತರ ನೀಡುತ್ತಾರೆ ಎಂಬ ವಿಶ್ವಾಸವಿದೆ. ಈ ಮಧ್ಯೆ ಮತ್ತೊಬ್ಬರು ಲಂಚದ ಕಿರುಕುಳ ತಾಳಲಾರದೆ ದಯಾಮರಣಕ್ಕೆ ಅರ್ಜಿ ಹಾಕಿರುವ ವಿಚಾರ ತಿಳಿದಿದೆ. ಭ್ರಷ್ಟ ಆಡಳಿತವನ್ನು ಸ್ವಚ್ಛ ಮಾಡಬೇಕಿದೆ. ಪ್ರಧಾನಿಗಳು ಬಂದಾಗ ರಸ್ತೆ ಗುಂಡಿಗಳನ್ನು ಹೇಗೆ ಮುಚ್ಚಲಾಗಿದೆಯೋ, ಅದೇ ರೀತಿ ಈ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಪ್ರಧಾನಿಗಳು ಅವರ ನಾಯಕರಿಗೆ ಸಂದೇಶ ನೀಡಬೇಕು ಎಂದು ಕೇಳುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( KPCC President DK Shivakumar ) ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪ್ರಧಾನಿಗಳು ಉತ್ತರ ನೀಡದಿದ್ದರೆ, ಕಾಂಗ್ರೆಸ್ ಮುಂದಿನ ಹೋರಾಟವೇನು ಎಂದು ಕೇಳಿದ ಪ್ರಶ್ನೆಗೆ, ‘ಮುಂದಿನ ಹೋರಾಟದ ಬಗ್ಗೆ ಮುಂದೆ ತಿಳಿಸುತ್ತೇನೆ. ಕೇಳಿದ ತಕ್ಷಣ ನಾವು ಹೋರಾಟ ಯೋಜನೆ ರೂಪಿಸಲು ಆಗುವುದಿಲ್ಲ. 5 ನಿಮಿಷದಲ್ಲಿ ಹೇಗೆ ಊಟ ಸಿದ್ಧಮಾಡಲು ಆಗುವುದಿಲ್ಲವೋ ಹಾಗೆ ಇದಕ್ಕೂ ಸಮಯ ಬೇಕಾಗುತ್ತದೆ’ ಎಂದರು.
ಶಿವಕುಮಾರ್ ಅವರು ಮುಂಚಿತವಾಗಿ ಸಲಹೆ ನೀಡಿದ್ದರೆ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಪ್ರತಿಮೆ ಸ್ಥಾಪಿಸಬಹುದಿತ್ತು ಎಂಬ ಸಚಿವರ ಹೇಳಿಕೆ ಬಗ್ಗೆ ಕೇಳಿದಾಗ, ‘ನಾನು ಅಲ್ಲಿಗೆ ಹೋದ ದಿನವೇ ಈ ಪ್ರತಿಮೆಯನ್ನು ಸರ್ಕಾರ ನಿರ್ಮಾಣ ಮಾಡುವ ಅಗತ್ಯವಿಲ್ಲ. ವಿಮಾನ ನಿಲ್ದಾಣ ಆಡಳಿತ ಮಂಡಳಿಯವರೇ ಮಾಡಬಹುದು. ಅವರಿಗೆ 50-60 ಕೋಟಿ ವೆಚ್ಚ ಮಾಡುವುದು ದೊಡ್ಡ ವಿಚಾರವಲ್ಲ ಎಂದು ಹೇಳಿದ್ದೆ. ಇವರು ಅವರದೇ ಆದ ಲೆಕ್ಕಾಚಾರ ಹಾಕಿಕೊಂಡು ಮಾಡುತ್ತಿದ್ದಾರೆ. ಸರ್ಕಾರದ ಹಣ ಹೇಗೆ ಉಳಿಸಬೇಕು, ಕಾಮಗಾರಿ ಹೇಗೆ ಮಾಡಿಸಬೇಕು ಎಂಬ ಬಗ್ಗೆ ಸಾಮಾನ್ಯ ಪರಿಜ್ಞಾನ ಇರಬೇಕು. ಇವರು ತಾವು ಹೆಸರು ಮಾಡಿಕೊಳ್ಳಲು ಈ ರೀತಿ ಮಾಡಿಕೊಳ್ಳುತ್ತಿದ್ದಾರೆ’ ಎಂದು ತಿಳಿಸಿದರು.
ಇವತ್ತಿನ ಕಾರ್ಯಕ್ರಮಕ್ಕಾಗಿ 48 ಕೋಟಿ ರು. ವೆಚ್ಚ ಮಾಡುತ್ತಿರುವ ಬಗ್ಗೆ ಕೇಳಿದಾಗ, ‘ತಮ್ಮ ಹಾಗೂ ಪಕ್ಷದ ವೈಭವೀಕರಣಕ್ಕೆ ಯಾವ ರೀತಿ ಹಣ ಖರ್ಚು ಮಾಡಲಾಗುತ್ತಿದೆ ಎಂಬುದರ ಬಗ್ಗೆ ಎಲ್ಲರಿಗೂ ಮಾಹಿತಿ ಇದೆ. ಅವರು ಯಾವ ರೀತಿಯಾದರೂ ಜನರನ್ನು ಕರೆದುಕೊಂಡು ಹೋಗಲಿ, ಆದರೆ ಇವರನ್ನು ಕಿತ್ತೊಗೆಯಲು ಜನ ಸಂಕಲ್ಪ ಮಾಡಿದ್ದು, ಅದು ಆಗಲಿದೆ’ ಎಂದರು.
ರಸ್ತೆಗಳಿಗೆ ಡಾಂಬಾರ್ ಹಾಕಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಅವರು ತಮ್ಮ ನಾಯಕರ ಪ್ರಯಾಣಕ್ಕೆ ರಸ್ತೆ ಮಾಡಿದ್ದಾರೆಯೇ ಹೊರತು ಜನರ ಅನುಕೂಲಕ್ಕೆ ಮಾಡಿಲ್ಲ’ ಎಂದು ತಿಳಿಸಿದರು.