ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ತಮಿಳುನಾಡಿನ ಕಲ್ಪಾಕ್ಕಂನಲ್ಲಿರುವ ಅಣು ವಿದ್ಯುತ್ ಸ್ಥಾವರವು ಸಾಧಿಸಿರುವ ಮೈಲಿಗಲ್ಲನ್ನು ‘ಐತಿಹಾಸಿಕ’ ಎಂದು ಬಣ್ಣಿಸಿದ್ದಾರೆ. ಭಾರತದ ಇಂಧನ ಸ್ವಾವಲಂಬನೆಯ ಹಾದಿಯಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಅವರು ಶ್ಲಾಘಿಸಿದರು.
ಕಲ್ಪಾಕ್ಕಂನ ‘ಪ್ರೊಟೊಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್’ (PFBR) ಕಾರ್ಯಾರಂಭದ ಪ್ರಕ್ರಿಯೆಯಲ್ಲಿ ಸಾಧಿಸಲಾದ ಪ್ರಗತಿಯು ಭಾರತದ ಪರಮಾಣು ಇಂಧನ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಮಾಡಿದೆ ಎಂದು ಪ್ರಧಾನಿ ತಿಳಿಸಿದರು.
ಈ ಸಂಕೀರ್ಣ ತಂತ್ರಜ್ಞಾನವನ್ನು ಭಾರತೀಯ ವಿಜ್ಞಾನಿಗಳು ಸಂಪೂರ್ಣವಾಗಿ ಸ್ವದೇಶಿ ಜ್ಞಾನದಿಂದ ಅಭಿವೃದ್ಧಿಪಡಿಸಿರುವುದು ಹೆಮ್ಮೆಯ ವಿಷಯ. ಇದು ‘ಆತ್ಮನಿರ್ಭರ ಭಾರತ’ಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ರಿಯಾಕ್ಟರ್ ಮೂಲಕ ಸುಸ್ಥಿರ ಮತ್ತು ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಯು ಹೆಚ್ಚಲಿದ್ದು, ದೇಶದ ಬೆಳೆಯುತ್ತಿರುವ ಇಂಧನ ಬೇಡಿಕೆಯನ್ನು ಪೂರೈಸಲು ಇದು ಸಹಕಾರಿಯಾಗಲಿದೆ ಎಂದು ಪ್ರಧಾನಿ ಮೋದಿ ವಿವರಿಸಿದರು.








