ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಧನ ಉಳಿತಾಯ ಮತ್ತು ಮಿತವ್ಯಯದ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಈಗ ಅದನ್ನು ಸ್ವತಃ ಜಾರಿಗೆ ತರುವ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ. ತಮ್ಮ ಅಧಿಕೃತ ಬೆಂಗಾವಲು ಪಡೆಯ (Convoy) ವಾಹನಗಳ ಸಂಖ್ಯೆಯನ್ನು ಅವರು ಗಣನೀಯವಾಗಿ ಕಡಿತಗೊಳಿಸಿದ್ದಾರೆ.
ನಾಗರಿಕರು ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡಬೇಕು, ಸಾಧ್ಯವಿರುವ ಕಡೆ ‘ವರ್ಕ್ ಫ್ರಮ್ ಹೋಮ್’ ಮಾಡಬೇಕು ಮತ್ತು ಅನಗತ್ಯ ವಿದೇಶಿ ಪ್ರವಾಸಗಳನ್ನು ತಪ್ಪಿಸಬೇಕು ಎಂದು ಮೋದಿ ಇತ್ತೀಚೆಗೆ ಮನವಿ ಮಾಡಿದ್ದರು. ಈಗ ಅವರು ಈ ನಿಯಮವನ್ನು ತಮ್ಮ ಪ್ರವಾಸಗಳಿಗೂ ಅನ್ವಯಿಸಿಕೊಂಡಿದ್ದಾರೆ.
ಇತ್ತೀಚೆಗೆ ಗುಜರಾತ್ ಮತ್ತು ಅಸ್ಸಾಂ ಪ್ರವಾಸಗಳ ವೇಳೆ ಪ್ರಧಾನಿಯವರ ಬೆಂಗಾವಲು ಪಡೆಯಲ್ಲಿ ವಾಹನಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು ಕಂಡುಬಂದಿದೆ. ಹೈದರಾಬಾದ್‌ನಲ್ಲಿ ಈ ಕುರಿತು ಮನವಿ ಮಾಡಿದ ನಂತರ, ವಡೋದರಾ ಮತ್ತು ಗುವಾಹಟಿ ಪ್ರವಾಸಗಳಲ್ಲಿ ಈ ಬದಲಾವಣೆ ಜಾರಿಯಾಗಿದೆ.
ಬೆಂಗಾವಲು ಪಡೆಯ ವಾಹನಗಳನ್ನು ಕಡಿಮೆ ಮಾಡಿದ್ದರೂ, ಪ್ರಧಾನಿಯವರ ಭದ್ರತೆಯಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಎಸ್‌ಪಿಜಿ (SPG) ಶಿಷ್ಟಾಚಾರ ಮತ್ತು ಅಗತ್ಯ ಭದ್ರತಾ ಕ್ರಮಗಳು ಸಂಪೂರ್ಣವಾಗಿ ಮುಂದುವರಿದಿದ್ದು, ಕೇವಲ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಮಾತ್ರ ವೈಜ್ಞಾನಿಕವಾಗಿ ಮರುಹೊಂದಿಸಲಾಗಿದೆ.








