ಬೆಂಗಳೂರು: “ಅವರು ಸರ್ಕಾರಿ ನೌಕರರು” ಎಂಬ ಒಂದೇ ಕಾರಣಕ್ಕೆ ಅವರ ಪ್ರತಿಯೊಂದು ವೈಯಕ್ತಿಕ ಮಾಹಿತಿಯನ್ನೂ ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸಾಮಾನ್ಯ ನಾಗರಿಕರಂತೆಯೇ ಸರ್ಕಾರಿ ಅಧಿಕಾರಿ ಹಾಗೂ ನೌಕರರಿಗೂ ತಮ್ಮ ವೈಯಕ್ತಿಕ ಬದುಕಿನ ಗೌಪ್ಯತೆಯನ್ನು ಕಾಯ್ದುಕೊಳ್ಳುವ ಸಂಪೂರ್ಣ ಹಕ್ಕಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಸರ್ಕಾರಿ ನೌಕರರ ಖಾಸಗಿ ವಿವರಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿರುವ ಹೈಕೋರ್ಟ್, ಈ ನಿಟ್ಟಿನಲ್ಲಿ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
ಖಾಸಗಿ ಜಗಳಕ್ಕೆ ಆರ್‌ಟಿಐ ಅಸ್ತ್ರ ಬಳಸುವಂತಿಲ್ಲ!
ಖಾಸಗಿ ವ್ಯಕ್ತಿಗಳ ನಡುವಿನ ಸಿವಿಲ್ ವಿವಾದಗಳು ಅಥವಾ ಕೋರ್ಟ್ ಕೇಸ್ ಗಳಿಗೆ ಸಾಕ್ಷಿ ಸಂಗ್ರಹಿಸುವ ಉದ್ದೇಶದಿಂದ ಆರ್ ಟಿಐ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಕೆಎಸ್ ಆರ್ ಟಿಸಿಯ ನಿವೃತ್ತ ಅಧಿಕಾರಿಯೊಬ್ಬರ ಆಸ್ತಿ ವಿವರಗಳನ್ನು ಕೋರಿ ಸವಿತಮ್ಮ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, ಈ ಹಿಂದಿನ ರಾಜ್ಯ ಮಾಹಿತಿ ಆಯೋಗ ಹಾಗೂ ಕೆಎಸ್‌ಆರ್‌ಟಿಸಿಯ ಆದೇಶಗಳನ್ನು ಎತ್ತಿಹಿಡಿದಿದೆ.
ಆರ್ ಟಿಐ ಕಾಯ್ದೆಯಡಿ ಅಧಿಕಾರಿಯೊಬ್ಬರ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಬೇಕಾದರೆ, ಅಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿಗಿಂತ ದೊಡ್ಡ ಮಟ್ಟದ ‘ಸಾರ್ವಜನಿಕ ಹಿತಾಸಕ್ತಿ’ ಅಡಗಿರಬೇಕು.ಆದರೆ, ಪ್ರಸ್ತುತ ಪ್ರಕರಣವು ಕೇವಲ ಖಾಸಗಿ ಜಮೀನು ಅಥವಾ ಆಸ್ತಿ ಕ್ರಯಪತ್ರಕ್ಕೆ ಸಂಬಂಧಿಸಿದ ವಿವಾದವಾಗಿದ್ದರಿಂದ, ಇದು ಸಾರ್ವಜನಿಕ ಹಿತಾಸಕ್ತಿಯ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.








