ಇತ್ತೀಚೆಗೆ ಸುಪ್ರೀಂ ಕೋರ್ಟ್ ಕಲಾಪದ ವೇಳೆ ನಡೆದ ಚರ್ಚೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾದ ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ವಿಡಂಬನಾತ್ಮಕ ಆನ್ಲೈನ್ ಅಭಿಯಾನದ ಚಟುವಟಿಕೆಗಳ ಕುರಿತು ಕೇಂದ್ರೀಯ ತನಿಖಾ ದಳದಿಂದ (CBI) ತನಿಖೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಇದರೊಂದಿಗೆ, ಕಾನೂನು ವಲಯದಲ್ಲಿ ನಕಲಿ ವಕೀಲರು ಮತ್ತು ನಕಲಿ ಕಾನೂನು ಪದವಿಗಳ ಹಾವಳಿಯ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಅರ್ಜಿ ಒತ್ತಾಯಿಸಿದೆ. ಈ ರೀತಿಯ ಬೆಳವಣಿಗೆಗಳು ಕಾನೂನು ವೃತ್ತಿಯ ಉನ್ನತ ಗುಣಮಟ್ಟ ಮತ್ತು ಘನತೆಯನ್ನು ಕುಸಿಯುವಂತೆ ಮಾಡುತ್ತಿವೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ ಎಂದು ‘ಲೈವ್ ಲಾ’ ವರದಿ ಮಾಡಿದೆ.
ನ್ಯಾಯವಾದಿ ರಾಜಾ ಚೌಧರಿ ಅವರು ಸಲ್ಲಿಸಿರುವ ಈ ಅರ್ಜಿಯಲ್ಲಿ, ನ್ಯಾಯಾಲಯದ ಕಲಾಪದ ವೇಳೆ ನ್ಯಾಯಾಧೀಶರು ಆಡಿದ ಮಾತುಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ದುರುಪಯೋಗಪಡಿಸಿಕೊಳ್ಳುತ್ತಿರುವವರ ವಿರುದ್ಧ, ಟ್ರೇಡ್ಮಾರ್ಕ್ ಹಕ್ಕುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಹಾಗೂ ಕೋರ್ಟ್ನ ಮಾತುಗಳನ್ನು ಹಣಗಳಿಕೆಯ (Monetised) ಉದ್ದೇಶಕ್ಕಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಲಾಗಿದೆ.
ಮೀಮ್ ರಾಜಕೀಯದ ಅಬ್ಬರ:
ನ್ಯಾಯಾಲಯದ ಕಲಾಪದ ವೇಳೆ ಆಡಲಾದ ಮಾತುಗಳನ್ನು ಸಂದರ್ಭದಿಂದ ಕತ್ತರಿಸಿ (Selectively edited), ತಮಗೆ ಬೇಕಾದಂತೆ ಮಾರ್ಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕಂಟೆಂಟ್, ಮೀಮ್ಸ್ ಮತ್ತು ವಾಣಿಜ್ಯ ಉದ್ದೇಶದ ವಸ್ತುಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ಈ ಬೆಳವಣಿಗೆಯಿಂದಾಗಿ ಈ ವಾರ ಗೂಗಲ್ ಟ್ರೆಂಡ್ಸ್ನಲ್ಲಿ (Google Trends) ‘ಕಾಕ್ರೋಚ್ ಜನತಾ ಪಾರ್ಟಿ’ ಭಾರೀ ಸದ್ದು ಮಾಡಿತ್ತು.
ಆದರೆ, ತಾವೇನು ನ್ಯಾಯಾಂಗದ ಮೇಲಿನ ಕಾನೂನುಬದ್ಧ ವಿಮರ್ಶೆ, ಪ್ರಜಾಸತ್ತಾತ್ಮಕ ಭಿನ್ನಾಭಿಪ್ರಾಯ, ವಿಡಂಬನೆ ಅಥವಾ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸಲು ಕೋರುತ್ತಿಲ್ಲ ಎಂದು ಅರ್ಜಿದಾರರು ಸ್ಪಷ್ಟಪಡಿಸಿದ್ದಾರೆ. ಅದರ ಬದಲಾಗಿ, ನ್ಯಾಯಾಲಯದ ಆಂತರಿಕ ಕಲಾಪಗಳ ಸಂಭಾಷಣೆಯನ್ನು ಡಿಜಿಟಲ್ ಲೋಕದಲ್ಲಿ ಹಣ ಗಳಿಸಲು ಮತ್ತು ವ್ಯವಸ್ಥಿತವಾಗಿ ವಾಣಿಜ್ಯೀಕರಣಗೊಳಿಸಲು ದುರುಪಯೋಗಪಡಿಸಿಕೊಳ್ಳುತ್ತಿರುವುದನ್ನು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಈ ಅರ್ಜಿಯಲ್ಲಿ ಭಾರತ ಸರ್ಕಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY), ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಮತ್ತು ಕೇಂದ್ರೀಯ ತನಿಖಾ ದಳವನ್ನು (CBI) ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.








