ನವದೆಹಲಿ:ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಭೀಕರ ಯುದ್ಧದ ಮಧ್ಯೆ ಕಳವಳಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ರಷ್ಯಾ ಸಶಸ್ತ್ರ ಪಡೆಗಳನ್ನು ಸೇರಿಕೊಂಡಿದ್ದ ಒಟ್ಟು 217 ಭಾರತೀಯರ ಪೈಕಿ ಬರೋಬ್ಬರಿ 49 ಭಾರತೀಯರು ಯುದ್ಧ ಭೂಮಿಯಲ್ಲಿ ಜೀವ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಅಧಿಕೃತ ಮಾಹಿತಿ ನೀಡಿದೆ.
ರಷ್ಯಾ ಸೇನೆಯಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ, ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ನೇತೃತ್ವದ ಪೀಠಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಆಘಾತಕಾರಿ ಸ್ಥಿತಿ ಗತಿ ವರದಿಯನ್ನು (Status Report) ಸಲ್ಲಿಸಿದೆ.
ಭಾರತ ಸರ್ಕಾರ ನಡೆಸಿದ ನಿರಂತರ ರಾಜತಾಂತ್ರಿಕ ಪ್ರಯತ್ನಗಳ ಫಲವಾಗಿ, ರಷ್ಯಾ ಸೇನೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದ 139 ಭಾರತೀಯರನ್ನು ಈಗಾಗಲೇ ಮಿಲಿಟರಿ ಸೇವೆಯಿಂದ ಮುಕ್ತಗೊಳಿಸಿ ಸುರಕ್ಷಿತವಾಗಿ ಬಿಡುಗಡೆ ಮಾಡಿಸಲಾಗಿದೆ.
ಯುದ್ಧದ ವೇಳೆ ಕನಿಷ್ಠ 6 ಭಾರತೀಯರು ನಾಪತ್ತೆಯಾಗಿದ್ದಾರೆ (Missing in Action) ಎಂದು ರಷ್ಯಾ ಖಚಿತಪಡಿಸಿದೆ. ಇದರೊಂದಿಗೆ ಇನ್ನು 23 ಭಾರತೀಯರ ಸದ್ಯದ ಪರಿಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲದಿದ್ದು, ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಬಗ್ಗೆ ನಿರಂತರ ತನಿಖೆ ನಡೆಸುತ್ತಿದೆ.
ಯುದ್ಧ ಭೂಮಿಯಲ್ಲಿ ಮೃತಪಟ್ಟವರ ದೇಹ ಗುರುತಿಸಲು ಮತ್ತು ನಾಪತ್ತೆಯಾದವರ ಪತ್ತೆಗಾಗಿ ಭಾರತದಲ್ಲಿರುವ 21 ಕುಟುಂಬಗಳ ಸದಸ್ಯರ ಡಿಎನ್ಎ (DNA) ಮಾದರಿಗಳನ್ನು ಸಂಗ್ರಹಿಸಿ ರಷ್ಯಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.








