ನವದೆಹಲಿ: ಹಿರಿಯ ರಾಜತಾಂತ್ರಿಕ ಅಧಿಕಾರಿ ಪೆರಿಯಾಸಾಮಿ ಕುಮರನ್ (Periasamy Kumaran) ಅವರನ್ನು ಯುನೈಟೆಡ್ ಕಿಂಗ್ಡಮ್ಗೆ (UK) ಭಾರತದ ಮುಂದಿನ ಹೈಕಮಿಷನರ್ ಆಗಿ ಕೇಂದ್ರ ಸರ್ಕಾರ ಗುರುವಾರ (ಮಾರ್ಚ್ 26, 2026) ನೇಮಕ ಮಾಡಿದೆ. ಪ್ರಸ್ತುತ ವಿದೇಶಾಂಗ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ (ಪೂರ್ವ) ಸೇವೆ ಸಲ್ಲಿಸುತ್ತಿರುವ ಇವರು ಶೀಘ್ರದಲ್ಲೇ ಲಂಡನ್ನಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
1992ರ ಬ್ಯಾಂಚ್ನ ಐಎಫ್ಎಸ್ (IFS) ಅಧಿಕಾರಿಯಾಗಿರುವ ಕುಮರನ್ ಅವರು ಮೂರು ದಶಕಗಳಿಗೂ ಹೆಚ್ಚು ಕಾಲ ವಿವಿಧ ದೇಶಗಳಲ್ಲಿ ಭಾರತದ ಪ್ರತಿನಿಧಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.ಪೆರಿಯಾಸಾಮಿ ಕುಮರನ್ ಅವರು 2005 ರಿಂದ 2007 ರವರೆಗೆ ಬೆಂಗಳೂರಿನ ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿಯಾಗಿ (RPO) ಸೇವೆ ಸಲ್ಲಿಸಿದ್ದರು. ಅವರ ಅವಧಿಯಲ್ಲಿ ಪಾಸ್ಪೋರ್ಟ್ ವಿತರಣಾ ಪ್ರಕ್ರಿಯೆಯಲ್ಲಿ ತಂದ ಸುಧಾರಣೆಗಳು ಜನಮನ್ನಣೆ ಗಳಿಸಿದ್ದವು.
ಈ ಹಿಂದೆ ಇವರು ಸಿಂಗಾಪುರಕ್ಕೆ ಭಾರತದ ಹೈಕಮಿಷನರ್ ಆಗಿ ಮತ್ತು ಖತಾರ್ಗೆ ಭಾರತದ ರಾಯಭಾರಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇದಲ್ಲದೆ ಇಸ್ಲಾಮಾಬಾದ್, ವಾಷಿಂಗ್ಟನ್ ಮತ್ತು ಕೊಲಂಬೊಗಳಲ್ಲಿಯೂ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.
ಪ್ರಸ್ತುತ ಬ್ರಿಟನ್ನಲ್ಲಿರುವ ವಿಕ್ರಮ್ ದೊರೈಸ್ವಾಮಿ ಅವರ ಸ್ಥಾನವನ್ನು ಕುಮರನ್ ಅಲಂಕರಿಸಲಿದ್ದಾರೆ. ವಿಕ್ರಮ್ ದೊರೈಸ್ವಾಮಿ ಅವರನ್ನು ಚೀನಾಕ್ಕೆ ಭಾರತದ ಮುಂದಿನ ರಾಯಭಾರಿಯಾಗಿ ನೇಮಿಸಲಾಗಿದೆ.








