ನವದೆಹಲಿ: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಹೈ-ಸ್ಕೋರಿಂಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಐತಿಹಾಸಿಕ ಸಾಧನೆ ಮಾಡಿದೆ. ಕೆ.ಎಲ್. ರಾಹುಲ್ ಅವರ ಸ್ಫೋಟಕ ಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 265 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಂಜಾಬ್, ಇನ್ನು 7 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು.
ಐಪಿಎಲ್ ಇತಿಹಾಸದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಅತ್ಯಂತ ಯಶಸ್ವಿ ರನ್ ಚೇಸ್ ಮಾಡಿದ ತನ್ನದೇ ಹಳೆಯ ದಾಖಲೆಯನ್ನು (262 ರನ್) ಈ ಪಂದ್ಯದ ಮೂಲಕ ಅಳಿಸಿ ಹಾಕಿದೆ.ಪಂಜಾಬ್ ಪರ ಆರಂಭಿಕ ಆಟಗಾರ ಪ್ರಭ್‌ಸಿಮ್ರಾನ್ ಸಿಂಗ್ ಕೇವಲ 26 ಎಸೆತಗಳಲ್ಲಿ 76 ರನ್ (9 ಬೌಂಡರಿ, 5 ಸಿಕ್ಸರ್) ಚಚ್ಚುವ ಮೂಲಕ ಪವರ್‌ಪ್ಲೇನಲ್ಲಿ ಅಡಿಪಾಯ ಹಾಕಿದರು.
ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತವಾಗಿ ಆಡಿದ ನಾಯಕ ಶ್ರೇಯಸ್ ಅಯ್ಯರ್ ಅಜೇಯ 71 ರನ್ (36 ಎಸೆತ, 7 ಸಿಕ್ಸರ್) ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಕೆ.ಎಲ್. ರಾಹುಲ್ ಕೇವಲ 67 ಎಸೆತಗಳಲ್ಲಿ ಅಜೇಯ 152 ರನ್ ಸಿಡಿಸಿ ದಾಖಲೆ ಬರೆದರೂ, ತಂಡಕ್ಕೆ ಜಯ ತಂದುಕೊಡಲು ಸಾಧ್ಯವಾಗಲಿಲ್ಲ.








