ಬೆಂಗಳೂರು: ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಪಂಚತಂತ್ರ ತಂತ್ರಾಂಶದಲ್ಲಿ ಇ-ಹಾಜರಾತಿ ದಾಖಲಿಸಲು ತಾಂತ್ರಿಕ ಸಮಸ್ಯೆಗಳು ಉಂಟಾದ ಸಂದರ್ಭಗಳಲ್ಲಿ ಅದನ್ನು ಪರಿಗಣಿಸದೇ ವೇತನ ಪಾವತಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಈ ಮೂಲಕ ತಾಂತ್ರಿಕ ದೋಷದ ಕಾರಣ ಇ-ಹಾಜರಾತಿ ಸಿಗದೇ ವೇತನ ವಿಳಂಬ ಅನುಭವಿಸುತ್ತಿದ್ದಂತ ಗ್ರಾಮ ಪಂಚಾಯ್ತಿ ನೌಕರರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ.
ಈ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರು ಎಲ್ಲಾ ಜಿಲ್ಲಾ ಪಂಚಾಯ್ತಿಗಳ ಸಿಇಓಗೆ ಪತ್ರ ಬರೆದಿದ್ದಾರೆ. ಅದರಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ತಾಂತ್ರಿಕ ದೋಷಗಳಿಂದಾಗಿ ಇ-ಹಾಜರಾತಿಯನ್ನು ದಾಖಲಿಸಲು ಸಾಧ್ಯವಾಗದೇ ಇದ್ದಾಗ, ಅಂಥಹ ತಾಂತ್ರಿಕ ದೋಷಗಳನ್ನು ಪಂಚತಂತ್ರ 2.0 ನಲ್ಲಿ ಸರಿಪಡಿಸಲು ಹಾಗೂ ಪೂರ್ಣ ವೇತನ ಪಾವತಿಸುವಂತೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ (ರಿ), (ಸಿಐಟಿಯು ಸಂಯೋಜಿತ), ರವರು ಉಲ್ಲೇಖಿತ ಸಭೆಯಲ್ಲಿ ಮನವಿ ಸಲ್ಲಿಸಿರುತ್ತಾರೆ ಎಂದಿದ್ದಾರೆ.
ಮುಂದುವರೆದು, ಪಂಚತಂತ್ರ 2.0 ತಂತ್ರಾಂಶದಲ್ಲಿ ಅಥವಾ ಮೊಬೈಲ್ ಆಪ್ ಮೂಲಕ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಇ-ಹಾಜರಾತಿಯನ್ನು ದಾಖಲಿಸಲು ತಾಂತ್ರಿಕ ಸಮಸ್ಯೆಗಳು ಉಂಟಾದ ಸಂದರ್ಭಗಳಲ್ಲಿ, ಇ-ಹಾಜರಾತಿಯನ್ನು ದಾಖಲಿಸದ ಕಾರಣಕ್ಕಾಗಿ ವೇತನವನ್ನು ಕಡಿತಗೊಳಿಸದೇ, ತಾಂತ್ರಿಕ ದೋಷ ಉಂಟಾಗಿರುವುದನ್ನು ದೃಢಪಡಿಸಿಕೊಂಡು ಮತ್ತು సిబ్బంది ಕರ್ತವ್ಯ ನಿರ್ವಹಿಸಿರುವುದನ್ನು ಖಚಿತಪಡಿಸಿಕೊಂಡು, ವೇತನವನ್ನು ಪಾವತಿಸಲು ಸೂಕ್ತ ಕ್ರಮವಹಿಸುವಂತೆ ಸೂಚಿಸಿದ್ದಾರೆ.

ರಾಜ್ಯದ ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲ್ಯಾಕ್ ಮೇಲ್: ಓರ್ವ ಮಹಿಳೆ ಅರೆಸ್ಟ್








