ಕಲಬುರ್ಗಿ : ಯಡ್ರಾಮಿಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದಲೇ ಅತ್ಯಾಚಾರ ಪ್ರಕರಣ ಖಂಡಿಸಿ ಇಂದು ಕಲಬುರಗಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಆಂದೋಲಾ ಸಿದ್ದಲಿಂಗ ಸ್ವಾಮಿಜಿಯವರು, ಕಾಂಗ್ರೆಸ್ ಮುಖಂಡರೇ ಒಂದು ನೆನಪಿರಲಿ, ನಿಮ್ಮ ಮನೆಯ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಆದ್ರೂ ಕಾಂಗ್ರೆಸ್ ಪಕ್ಷ ನಿಮ್ಮ ನೆರವಿಗೆ ಬರಲ್ಲ ಎಂದು ಎಚ್ಚರಿಕೆ ನೀಡಿದರು.
ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ನೇಹಾ ಹಿರೇಮಠ ಘಟನೆಯೇ ಇದಕ್ಕೆ ಜೀವಂತ ಸಾಕ್ಷಿ. ನೇಹಾ ಹಿರೇಮಠ ತಂದೆ ಕಾಂಗ್ರೆಸ್‌ನಲ್ಲಿದ್ದವರು ಎಂಬುದು ಗೊತ್ತೇ ಇದೆ. ನಾಳೆ ಆ ಪರಿಸ್ಥಿತಿ ನಿಮಗೂ ಬರಬಹುದು. ಕಾಂಗ್ರೆಸ್ ಮತ ಬ್ಯಾಂಕ್ ಗೆ ಆ ಸಮುದಾಯವನ್ನು ಏನು ಮಾಡಿದರೂ ಸಹಿಸಿಕೊಳ್ಳುತ್ತದೆ ಹೊರತು ನೀವು ನಂಬಿದ ಪಕ್ಷ ನಿಮ್ಮ ಸಹಾಯಕ್ಕೆ ಬರುವುದಿಲ್ಲ. ಕಾಂಗ್ರೆಸ್ ದಲಿತ ಪರ ಅಂತಾ ಮಾತುಮಾತಿಗೆ ಹೇಳ್ತಾರೆ. ನಿಜಕ್ಕೂ ಕಾಂಗ್ರೆಸ್ ದಲಿತ ಪರವಾಗಿ ಯಾವುದೇ ಕಾಳಜಿ ಇಲ್ಲ.
ಭಾರತವೂ ಬಾಂಗ್ಲಾ, ಪಾಕಿಸ್ತಾನ ಆಗುತ್ತಿದೆ ಎಂದು ಕೆಲವು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ಭಾರತ ಬಾಂಗ್ಲಾ ರೀತಿ ಆದ್ರೆ ನಿಮ್ಮ ಮನೆಗಳೂ ಸುಟ್ಟು ಹೋಗ್ತವೆ. ಕಾಂಗ್ರೆಸ್ ನಾಯಕರಿಗೆ ಇದು ಗೊತ್ತಿರಲಿ.ಕಾಂಗ್ರೆಸ್ ಮುಸ್ಲಿಂ ಓಲೈಕೆ ಮಾಡುತ್ತಿದೆ, ದಲಿತರನ್ನು ಕಡೆಗಣಿಸುತ್ತಿದೆ.ದಲಿತ-ಮುಸ್ಲಿಮ್ ಅಂತಾ ಎರಡು ಆಯ್ಕೆ ಬಂದಾಗ ಕಾಂಗ್ರೆಸ್ ವೋಟ್‌ಬ್ಯಾಂಕ್ ಗಾಗಿ ದಲಿತರನ್ನು ಕೈಬಿಡಲು ಹಿಂದೆಮುಂದೆ ನೋಡುವುದಿಲ್ಲ ಎಂಬುದಕ್ಕೆ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಿದ ಘಟನೆಯೂ ನೆನಪಿಸಿಕೊಳ್ಳಿ ಎಂದರು.
ಒಂದೂವರೆ ವರ್ಷದಿಂದ ಕಲಬುರಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ನಾಯಿ ಬಾಲ ಅಲ್ಲಾಡಿಸುವುದು ಸಾಮಾನ್ಯ. ಆದ್ರೆ ಕಲಬುರಗಿ ಜಿಲ್ಲೆಯಲ್ಲಿ ಬಾಲವೇ ನಾಯಿಯನ್ನು ಅಲುಗಾಡಿಸುತ್ತಿದೆ. ಕೆಲ ಕ್ರಿಮಿನಲ್‌ಗಳ ಮಾತುಗಳು ಅಧಿಕಾರಿಗಳು ಕೇಳುತ್ತಿದ್ದಾರೆ ಎಂದರೆ ಯೋಚಿಸಿ ಕಾನೂನು, ಈ ಅಧಿಕಾರಿಗಳು ತಮ್ಮ ಘನತೆ, ಗೌರವ ಮರೆತು ಯಾವ ಮಟ್ಟಕ್ಕೆ ಇಳಿದಿದ್ದಾರೆ ಎಂದು ಕಿಡಿಕಾರಿದರು.