ಕೋಲ್ಕತ್ತಾ : ಶನಿವಾರ ಸಂಜೆ ಕೋಲ್ಕತ್ತಾದಲ್ಲಿರುವ ಭಾರತೀಯ ವಸ್ತುಸಂಗ್ರಹಾಲಯದಲ್ಲಿ ಭದ್ರತಾ ಸಿಬ್ಬಂದಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ್ದಾನೆ. ಈ ವೇಳೆ ಓರ್ವ ಸಿಐಎಸ್ಎಫ್(ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ) ಕಾನ್ಸ್ಟೆಬಲ್ ಸಾವನ್ನಪ್ಪಿದ್ದು, ಮತ್ತೋರ್ವ ಡಿಎಸ್ಪಿ ಶ್ರೇಣಿಯ ಅಧಿಕಾರಿಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಸಿಐಎಸ್ಎಫ್ ಬ್ಯಾರಕ್ನಲ್ಲಿ ಈ ಗುಂಡಿನ ದಾಳಿ ನಡೆದಿದ್ದು, ಈತ ತನ್ನ ಸೇವಾ ಆಯುಧವನ್ನು ಬಳಸಿ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದಾನೆ. ಇದೀಗ ಕಾನ್ಸ್ಟೆಬಲ್ನನ್ನು ಪೊಲೀಸರು ನಿಶ್ಯಸ್ತ್ರಗೊಳಿಸಿ ಆತನನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ʻಈ ಘಟನೆ ನಿನ್ನೆ ಸಂಜೆ 6.30 ರ ಸುಮಾರಿಗೆ ನಡೆದಿದೆ. ಘಟನೆಯಲ್ಲಿ ಒಬ್ಬ ಸಿಐಎಸ್ಎಫ್ ಜವಾನ ಸಾವನ್ನಪ್ಪಿದ್ದಾನೆ ಮತ್ತು ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಇನ್ನೂ, ವಾಹನದ ಚಾಲಕ ಸೇರಿದಂತೆ ಹಲವಾರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಈಗಾಗಲೇ ನಾವು ಆರೋಪಿಯನ್ನು ಬಂಧಿಸಿದ್ದೇವೆʼ ಎಂದು ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ತಿಳಿಸಿದ್ದಾರೆ.
ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ ಅಥವಾ ಸಿಐಎಸ್ಎಫ್ ಡಿಸೆಂಬರ್ 2019 ರಲ್ಲಿ ವಸ್ತುಸಂಗ್ರಹಾಲಯದ ಸಶಸ್ತ್ರ ಭದ್ರತೆಯನ್ನು ವಹಿಸಿಕೊಂಡಿತು. ಕೋಲ್ಕತ್ತಾದ ಹೃದಯಭಾಗದಲ್ಲಿರುವ ವಸ್ತುಸಂಗ್ರಹಾಲಯವು ಕೇಂದ್ರ ಸಂಸ್ಕೃತಿ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಸ್ವಾಯತ್ತ ಸಂಸ್ಥೆಯಾಗಿದೆ.