ಭಾರತೀಯ ಚಿತ್ರರಂಗದ ದಂತಕಥೆ, ಬಾಲಿವುಡ್ನ ಒರಿಜಿನಲ್ ‘ಹೀ-ಮ್ಯಾನ್’ ಎಂದೇ ಖ್ಯಾತರಾಗಿದ್ದ ದಿವಂಗತ ನಟ ಧರ್ಮೇಂದ್ರ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ‘ಪದ್ಮವಿಭೂಷಣ’ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರದಾನ ಮಾಡಲಾಗಿದೆ. ರಾಷ್ಟ್ರಪತಿ ಭವನದಲ್ಲಿ ಸೋಮವಾರ (ಮೇ 25) ಸಂಜೆ ನಡೆದ ಅದ್ಧೂರಿ ಸಮಾರಂಭದಲ್ಲಿ, ಧರ್ಮೇಂದ್ರ ಅವರ ಪರವಾಗಿ ಅವರ ಪತ್ನಿ, ಖ್ಯಾತ ನಟಿ ಹಾಗೂ ಸಂಸದೆ ಹೇಮಾ ಮಾಲಿನಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.
ಆರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗಕ್ಕೆ ಧರ್ಮೇಂದ್ರ ಅವರು ನೀಡಿದ ಅಪ್ರತಿಮ ಕೊಡುಗೆಯನ್ನು ಗೌರವಿಸಿ ಈ ಪ್ರಶಸ್ತಿ ನೀಡಲಾಗಿದೆ. ತಿಳಿ ಗುಲಾಬಿ ಬಣ್ಣದ ಸೀರೆಯನ್ನು ಉಟ್ಟು ಅತ್ಯಂತ ಗಂಭೀರವಾಗಿ ವೇದಿಕೆಯತ್ತ ಹೆಜ್ಜೆ ಹಾಕಿದ ಹೇಮಾ ಮಾಲಿನಿ, ಪ್ರಶಸ್ತಿಯನ್ನು ಸ್ವೀಕರಿಸುವಾಗ ತೀವ್ರ ಭಾವುಕರಾದರು. ಇದೇ ವೇಳೆ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಅವರ ಪುತ್ರಿ ಅಹಾನಾ ಡಿಯೋಲ್, ತಂದೆಯ ಹೆಸರು ಅನೌನ್ಸ್ ಆಗುತ್ತಿದ್ದಂತೆ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರಿಟ್ಟರು.
ಪ್ರಶಸ್ತಿ ಸ್ವೀಕಾರಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಹೇಮಾ ಮಾಲಿನಿ, “ಇದು ನನ್ನ ಪಾಲಿಗೆ ಮತ್ತು ಇಡೀ ಕುಟುಂಬಕ್ಕೆ ಅತ್ಯಂತ ಭಾವುಕ ಹಾಗೂ ಹೆಮ್ಮೆಯ ಕ್ಷಣವಾಗಿದೆ. ಈ ಗೌರವದಿಂದ ಇಡೀ ದೇಶವೇ ಸಂತೋಷಪಟ್ಟಿದೆ. ಧರ್ಮ ಜಿ ಅವರ ಕೊಡುಗೆಯನ್ನು ಸರ್ಕಾರ ಗುರುತಿಸಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ. ಒಂದು ವೇಳೆ ಅವರು ಬದುಕಿದ್ದಾಗ ಈ ಪ್ರಶಸ್ತಿ ಬಂದಿದ್ದರೆ ಅವರು ಮತ್ತು ಅವರ ಕೋಟ್ಯಂತರ ಅಭಿಮಾನಿಗಳು ಇನ್ನು ಹೆಚ್ಚು ಸಂತೋಷಪಡುತ್ತಿದ್ದರು,” ಎಂದು ಹೇಳಿದರು








