ಮಾಜಿ ನಟಿ ಹಾಗೂ ಮಾಡೆಲ್ ಟ್ವಿಶಾ ಶರ್ಮಾ ಅವರ ಸಾವು ಪ್ರಕರಣದ ವಿಚಾರಣೆ ವೇಳೆ, ಮಧ್ಯಪ್ರದೇಶ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸುತ್ತಾ, ಪೋಷಕರಿಗೆ ಇದರಲ್ಲಿ ಒಂದು ನೈತಿಕ ಪಾಠವಿದೆ; ಅದೇನೆಂದರೆ, ಸತ್ತ ಮಗಳನ್ನು ಹೊಂದುವುದಕ್ಕಿಂತ ವಿಚ್ಛೇದನ ಪಡೆದ ಮಗಳನ್ನು ಹೊಂದುವುದು ಎಷ್ಟೋ ಮೇಲು ಎಂದು ಹೇಳಿದರು.
”ಒಂದು ವಿಷಯವಂತೂ ಸ್ಪಷ್ಟವಾಗಿದೆ, ಅದೇನೆಂದರೆ ಆ ಯುವತಿ ತನ್ನ ಪ್ರಾಣ ಕಳೆದುಕೊಂಡಿದ್ದಾಳೆ. ಇದು ಆತ್ಮಹತ್ಯೆಯೋ ಅಥವಾ ಬೇರೇನೋ ಆಗಿರಲಿ, ಪೋಷಕರಿಗೆ ಇರುವ ನೈತಿಕ ಪಾಠವೆಂದರೆ ಸತ್ತ ಮಗಳಿಗಿಂತ ವಿಚ್ಛೇದನ ಪಡೆದ ಮಗಳೇ ಮೇಲು,” ಎಂದು ಅವರು ದೇಶದ ಅತ್ಯುನ್ನತ ನ್ಯಾಯಾಲಯಕ್ಕೆ ತಿಳಿಸಿದರು.
ಈ ಪ್ರಕರಣದ ತನಿಖೆಯನ್ನು ಒಂದು ದಿನದ ಒಳಗಾಗಿ ಸಿಬಿಐ (CBI) ವಹಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಲಾಯಿತು. ಈ ವಿಷಯದ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂಬ ಮಧ್ಯಪ್ರದೇಶ ಸರ್ಕಾರದ ಸಲ್ಲಿಕೆಯನ್ನು ನ್ಯಾಯಪೀಠವು ದಾಖಲಿಸಿಕೊಂಡಿತು.
ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ನೇತೃತ್ವದ ನ್ಯಾಯಪೀಠಕ್ಕೆ ಮಧ್ಯಪ್ರದೇಶ ಸರ್ಕಾರವು, ಈ ವಿಷಯದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (CBI) ವರ್ಗಾಯಿಸಲಾಗುವುದು ಎಂದು ಮಾಹಿತಿ ನೀಡಿತು.ಇದೇ ವೇಳೆ, ಅತ್ಯುನ್ನತ ನ್ಯಾಯಾಲಯವು ಪ್ರಕರಣದ ಎರಡೂ ಪಕ್ಷದವರು ಹಾಗೂ ಮಾಧ್ಯಮಗಳು ಸಾರ್ವಜನಿಕವಾಗಿ ಯಾವುದೇ ಹೇಳಿಕೆಗಳನ್ನು ನೀಡಬಾರದು ಎಂದು ವಿನಂತಿಸಿತು.
”ಸಂತ್ರಸ್ತೆಯ ಕುಟುಂಬದವರಾಗಲಿ ಅಥವಾ ಇನ್ನೊಂದು ಕುಟುಂಬದವರ ಹೇಳಿಕೆಗಳ ಬೆನ್ನತ್ತಿ ಹೋಗಬೇಡಿ. ಇಲ್ಲದಿದ್ದರೆ, ನ್ಯಾಯಾಂಗವು ನಿಷ್ಪಕ್ಷಪಾತ ವಿಚಾರಣೆಗೆ ಅವಕಾಶ ನೀಡುತ್ತಿಲ್ಲ ಎಂದು ಒಂದು ವರ್ಗದ ಜನರು ಹೇಳಲು ಪ್ರಾರಂಭಿಸುತ್ತಾರೆ. ನಮಗೆ ನಮ್ಮ ರಾಜ್ಯದ ತನಿಖಾ ಸಂಸ್ಥೆಗಳ ಮೇಲಾಗಲಿ ಅಥವಾ ಸಿಬಿಐ ಮೇಲಾಗಲಿ ಯಾವುದೇ ಅನುಮಾನವಿಲ್ಲ. ಕೇವಲ ಒಂದು ರೀತಿಯ ನಿರೂಪಣೆಯನ್ನು (narrative) ಸೃಷ್ಟಿಸಲಾಗುತ್ತಿರುವುದರಿಂದ ನಾವು ಈ ಕ್ರಮ ಕೈಗೊಳ್ಳುತ್ತಿದ್ದೇವೆ. ನಡೆದಿರುವ ಈ ದುರದೃಷ್ಟಕರ ಘಟನೆಯ ಬಗ್ಗೆ ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತ ತನಿಖೆಯಾಗುವುದನ್ನು ನಾವು ಖಚಿತಪಡಿಸುತ್ತೇವೆ,” ಎಂದು ಸಿಜೆಐ ಹೇಳಿದರು.
ಟ್ವಿಶಾ ಶರ್ಮಾ ಅವರ ಸಾವಿನ ತನಿಖೆಯಲ್ಲಿ ಸಾಂಸ್ಥಿಕ ಪಕ್ಷಪಾತ ಮತ್ತು ಪ್ರಕ್ರಿಯಾತ್ಮಕ ಲೋಪದೋಷಗಳು ನಡೆದಿವೆ ಎಂಬ ಆರೋಪಗಳನ್ನು ಗಮನಕ್ಕೆ ತಡಿಕೊಂಡ ನಂತರ ನ್ಯಾಯಾಲಯವು ಈ ಸ್ವಯಂಪ್ರೇರಿತ (Suo Motu) ವಿಚಾರಣೆಯನ್ನು ಪ್ರಾರಂಭಿಸಿತ್ತು.
ಮೃತ ಸಂತ್ರಸ್ತೆಯ ಪರವಾಗಿ ಹಾಜರಿದ್ದ ಹಿರಿಯ ನ್ಯಾಯವಾದಿ ಸಿದ್ಧಾರ್ಥ್ ಲೂತ್ರಾ ಅವರು, ಎಫ್‌ಐಆರ್ (FIR) ದಾಖಲಿಸುವಲ್ಲಿ ಆಗಿರುವ ವಿಳಂಬದ ಬಗ್ಗೆ ಕಳವಳ ವ್ಯಕ್ತಪಡಿಸಿದರು ಮತ್ತು ಸಿಬಿಐ ಅಧಿಕೃತವಾಗಿ ತನಿಖೆಯನ್ನು ವಹಿಸಿಕೊಳ್ಳುವ ಮುನ್ನ ಕೆಲವು ಪ್ರಮುಖ ವಿಷಯಗಳನ್ನು ಬಗೆಹರಿಸಬೇಕಾಗಿದೆ ಎಂದು ಹೇಳಿದರು.ಆದಾಗ್ಯೂ, ತಾವು ಸದ್ಯಕ್ಕೆ ತನಿಖೆಯ ಗುಣಾವಗುಣಗಳನ್ನು (merits) ಪರಿಶೀಲಿಸುತ್ತಿಲ್ಲ ಮತ್ತು ಸ್ವತಂತ್ರವಾಗಿ ತನಿಖೆ ನಡೆಸಲು ಈ ವಿಷಯವನ್ನು ಮುಕ್ತವಾಗಿ ಬಿಟ್ಟಿರುವುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿತು.
”ನಾವು ಸಂತ್ರಸ್ತೆಯ ಕುಟುಂಬದ ಸದಸ್ಯರಿಗೆ ಮನವರಿಕೆ ಮಾಡಲು ಬಯಸುವುದೇನೆಂದರೆ, ಅವರು ಸಾರ್ವಜನಿಕವಾಗಿ ಅಥವಾ ಮಾಧ್ಯಮ ವೇದಿಕೆಗಳಲ್ಲಿ ಹೇಳಿಕೆಗಳನ್ನು ನೀಡುವ ಬದಲು, ತನಿಖಾ ಸಂಸ್ಥೆಯ ಮುಂದೆ ತಮ್ಮ ಆವೃತ್ತಿಯನ್ನು ದಾಖಲಿಸಬೇಕು. ಇದರಿಂದಾಗಿ ಪ್ರಸ್ತುತ ನಡೆಯುತ್ತಿರುವ ತನಿಖೆಗೆ ಯಾವುದೇ ಪೂರ್ವಾಗ್ರಹ ಅಥವಾ ಧಕ್ಕೆ ಉಂಟಾಗುವುದಿಲ್ಲ,” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಸಾಕ್ಷಿಗಳು ಅಥವಾ ಆರೋಪಿಗಳಾಗಬಹುದಾದ ವ್ಯಕ್ತಿಗಳಿಂದ ಹೇಳಿಕೆಗಳನ್ನು ದಾಖಲಿಸುವುದನ್ನು ಮಾಧ್ಯಮಗಳು ತಪ್ಪಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
”ಅವರು ಅನಗತ್ಯವಾಗಿ ಯಾವುದೇ ಒಂದು ವಿಷಯದ ಬಗ್ಗೆ ಮೊದಲೇ ತೀರ್ಮಾನಕ್ಕೆ ಬರಬಾರದು,” ಎಂದು ನ್ಯಾಯಪೀಠ ತಿಳಿಸಿದೆ.
33 ವರ್ಷದ ಟ್ವಿಶಾ ಶರ್ಮಾ ಅವರು ಮೇ 12 ರಂದು ಭೋಪಾಲ್‌ನ ಕಟಾರಾ ಹಿಲ್ಸ್ ಪ್ರದೇಶದಲ್ಲಿರುವ ತಮ್ಮ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಕೆಯ ಕುಟುಂಬಸ್ಥರು ಗಂಡನ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊರಿಸಿದ್ದಾರೆ. ಆದರೆ ಸಿಂಗ್ ಕುಟುಂಬವು ಆಕೆಗೆ ಮಾದಕವಸ್ತುಗಳ (drugs) ವ್ಯಸನವಿತ್ತು ಎಂದು ಆರೋಪಿಸಿದೆ.








