ಕೆಎನ್ಎನ್ಸಿನಿಮಾಡೆಸ್ಕ್: ಸ್ವರಸಂಗಮ ಎಂಟರ್ಟೈನ್ಮೆಂಟ್ ಬ್ಯಾನರ್ನಲ್ಲಿ ಆರ್. ಸುರೇಶಬಾಬು ನಿರ್ಮಿಸಿ, ಮಲೆನಾಡ ಸುಪ್ರಸಿದ್ಧ ರಂಗಕರ್ಮಿ ರಮೇಶ ಬೇಗಾರ್ ನಿರ್ದೇಶಿಸಿರುವ ‘ವೈಶಂಪಾಯನ ತೀರ…’ ಸಿನಿಮಾಕ್ಕೆ ಯಾವುದೇ ಕಟ್ಸ್ ಮತ್ತು ಮ್ಯೂಟ್ಸ್ ಇಲ್ಲದೆ ಸೆನ್ಸಾರ್ ನಿಂದ ‘ಯು’ ಪ್ರಮಾಣಪತ್ರ ಸಿಕ್ಕಿದೆ. ಸಾಹಿತಿ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಸಣ್ಣಕತೆಯನ್ನು ಆಧರಿಸಿರುವ ಈ ಸಿನಿಮಾದಲ್ಲಿ ಯಕ್ಷಗಾನದ ಹಿನ್ನೆಲೆಯಲ್ಲಿ ಪ್ರಕೃತಿ ಮತ್ತು ಪುರುಷನ ಸಂಬಂಧವನ್ನು ವಿಭಿನ್ನವಾದ ನಿರೂಪಿಸಲಾಗಿದೆ.
ಸಂಪೂರ್ಣವಾಗಿ ಮಲೆನಾಡ ಭಾಷೆ, ಜನಜೀವನ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಪ್ರಮೋದ್ ಶೆಟ್ಟಿ ನಾಯಕನಾಗಿ, ವೈಜಯಂತಿ ಅಡಿಗ ನಾಯಕಿಯಾಗಿರುವ ಈ ಚಿತ್ರದಲ್ಲಿ. ರವೀಶ್ ಹೆಗಡೆ, ಪ್ರಸನ್ನ ಶೆಟ್ಟಿಗಾರ್, ರಮೇಶ್ ಭಟ್, ಬಾಬು ಹಿರಣ್ಣಯ್ಯ, ರಮೇಶ್ ಪಂಡಿತ್, ಗುರುರಾಜ ಹೊಸಕೋಟೆ, ಶೃಂಗೇರಿ ರಾಮಣ್ಣ, ರವಿಕುಮಾರ್, ಸತೀಶ್ ಪೈ, ಸಂತೋಷ್ ಪೈ ಮೊದಲಾದವರು ಇತರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ ಶ್ರೀನಿಧಿ ಕೊಪ್ಪ ಹಿನ್ನೆಲೆ ಸಂಗೀತ, ಶಶಿರ ಛಾಯಾಗ್ರಹಣ, ಅವಿನಾಶ್ ಸಂಕಲನವಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ ಇದೇ ಜನವರಿ ತಿಂಗಳಿನಲ್ಲಿ ಚಿತ್ರವನ್ನು ತೆರೆಗೆ ತರವ ಯೋಜನೆಯಲ್ಲಿದೆ.