ಮುಂಬೈ. ಮಹಾರಾಷ್ಟ್ರದ ನಂದೂರ್ಬಾರ್ನಲ್ಲಿ ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬರು ತಮ್ಮ ಮಗಳ ಶವವನ್ನು 44 ದಿನಗಳ ಕಾಲ ಉಪ್ಪಿನ ಗುಂಡಿಯಲ್ಲಿ ಇರಿಸಿ ಎರಡನೇ ಮರಣೋತ್ತರ ಪರೀಕ್ಷೆಯನ್ನು ನಡೆಸಲು ಸಹಾಯ ಮಾಡಿದರು ಎನ್ನಲಾಗಿದೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳಿಗೆ ಅಧಿಕಾರಿಯೊಬ್ಬರು ಈ ಮಾಹಿತಿಯನ್ನು ನೀಡಿದ್ದಾರೆ. ಸಾಯುವ ಮುನ್ನ ತನ್ನ ಮಗಳ ಮೇಲೆ ಅತ್ಯಾಚಾರ ನಡೆದಿದೆ ಎಂದು ತಂದೆ ಆರೋಪಿಸಿದ್ದಾರೆ ಮತ್ತು ಸತ್ಯವನ್ನು ಕಂಡುಹಿಡಿಯಲು ತನ್ನ ಮಗಳ ಶವದ ಎರಡನೇ ಮರಣೋತ್ತರ ಪರೀಕ್ಷೆಯನ್ನು ನಡೆಸಬೇಕೆಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ನಂದೂರ್ಬಾರ್ ಜಿಲ್ಲೆಯ 21 ವರ್ಷದ ಮಹಿಳೆಯ ದೇಹವನ್ನು ಗುರುವಾರ ಮುಂಬೈನ ಸರ್ಕಾರಿ ಸ್ವಾಮ್ಯದ ಜೆಜೆ ಆಸ್ಪತ್ರೆಗೆ ತರಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ತಜ್ಞ ವೈದ್ಯರ ಸಮಿತಿಯನ್ನು ರಚಿಸಲಾಗುತ್ತಿದೆ ಮತ್ತು ಮರಣೋತ್ತರ ಪರೀಕ್ಷೆಯನ್ನು ಬಹುಶಃ ಶುಕ್ರವಾರ ನಡೆಸಲಾಗುವುದು” ಎಂದು ಅಧಿಕಾರಿ ಇದೇ ವೇಳೆ ಹೇಳಿದ್ದಾರೆ . ಆಗಸ್ಟ್ 1 ರಂದು ನಂದೂರ್ಬಾರ್ನ ಧಡ್ಗಾಂವ್ನ ವಾವಿಯಲ್ಲಿ ಮಹಿಳೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ತನ್ನ ಮಗಳ ಮೇಲೆ ನಾಲ್ವರು ಪುರುಷರು ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆಯ ತಂದೆ ಆರೋಪಿಸಿದ್ದಾರೆ.