ಬೆಂಗಳೂರು : ರಾಜ್ಯದಲ್ಲಿ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡ ಬೆನ್ನಲ್ಲೇ ʻಬೆಂಗಳೂರು ಗ್ರಾಮಾಂತರ ಜಿಲ್ಲೆಯ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ರಾಸುಗಳ ಜಾತ್ರೆ ರದ್ದುʼಗೊಳಿಸಲಾಗಿದೆ
ಚರ್ಮಗಂಟು ರೋಗ ಒಂದು ವೈರಾಣುನಿಂದ ಹರಡುವ ರೋಗವಾಗಿದ್ದು ಹಾಗೂ ಪ್ರಮುಖವಾಗಿ ಸೊಳ್ಳೆ, ನೊಣ, ಉಣ್ಣೆ ಇತ್ಯಾದಿ ಕೀಟಗಳಿಂದ ಹರಡುತ್ತದೆ. ಈ ರೋಗವು ಕಾಣಿಸಿಕೊಂಡ ಜಾನುವಾರುಗಳು ರೋಗದಿಂದ ಸಾಕಷ್ಟು ಬಳಲುವುದರಿಂದ ಉತ್ಪಾದನೆ ಕಡಿಮೆಯಾಗುವುದಲ್ಲದೇ, ಕೆಲವೊಮ್ಮೆ ಮರಣ ಹೊಂದುತ್ತವೆ. ಜಾನುವಾರುಗಳ ಆರೋಗ್ಯದ ಹಿತದೃಷ್ಟಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ತಡೆಗಟ್ಟುವುದಕ್ಕಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಘಾಟಿ ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡಬೇಕು. ಸಾರ್ವಜನಿಕರು ಸ್ವ-ಹಿತದೃಷ್ಟಿಯಿಂದ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ಈವರೆಗೂ 2037 ಜಾನುವಾರುಗಳಲ್ಲಿ ಈ ರೋಗವು ಕಂಡುಬಂದಿದೆ. 154 ಜಾನುವಾರುಗಳು ಮರಣಹೊಂದಿವೆ. ಈಗಾಗಲೇ 1,51,526 ಜಾನುವಾರುಗಳಿಗೆ ಲಸಿಕೆ ನೀಡಲಾಗಿದ್ದು, ರೋಗ ಪೀಡಿತ ಜಾನುವಾರುಗಳ ಸೂಕ್ತ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿರುವ ಶ್ರೀ ಘಾಟಿ ಸುಬ್ರಮಣ್ಯ ದೇವಾಲಯದ ಬ್ರಹ್ಮರಥೋತ್ಸವ ಕಾರ್ಯಕ್ರಮಗಳು ಡಿಸೆಂಬರ್ 24 ರಿಂದ 28ರವರೆಗೆ ಹಾಗೂ ಸುಬ್ರಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವವು ಡಿಸೆಂಬರ್ 28 ರಂದು ನಡೆಯಲಿದೆ. 2023ರ ಜನವರಿ 30ರ ಸಂಜೆ 6 ಗಂಟೆಯವರೆಗೂ ಜಿಲ್ಲೆಯಾದ್ಯಂತ ಜಾನುವಾರುಗಳ ಜಾತ್ರೆ/ ಸಂತೆ/ ಸಾಗಾಣಿಕೆಗಳನ್ನು ನಿರ್ಬಂಧಿಸಿ ಆದೇಶಿಸಲಾಗಿರುತ್ತದೆ. ಇದರನ್ವಯ ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ಕ್ಷೇತ್ರದಲ್ಲಿ 2022-23ನೇ ಸಾಲಿನಲ್ಲಿ ನಡೆಯುವ ರಾಸುಗಳ ಜಾತ್ರೆ ರದ್ದುಪಡಿಸಲಾಗಿದ್ದು, ರೈತರು ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.