ನೋಯ್ಡಾ: ಕೈಗಾರಿಕಾ ನಗರ ನೋಯ್ಡಾದಲ್ಲಿ ಕಾರ್ಮಿಕರ ಪ್ರತಿಭಟನೆ ಮತ್ತು ಹಿಂಸಾಚಾರ ಎರಡನೇ ದಿನವೂ ಮುಂದುವರಿದಿದೆ. ಸರ್ಕಾರವು ವೇತನ ಹೆಚ್ಚಳದ ಭರವಸೆ ನೀಡಿದ್ದರೂ, ಅದನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಪಟ್ಟು ಹಿಡಿದಿರುವ ಕಾರ್ಮಿಕರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಈ ಸಂಬಂಧ ಕಲ್ಲು ತೂರಾಟ ಮತ್ತು ಆಸ್ತಿಪಾಸ್ತಿ ಹಾನಿ ಮಾಡಿದ ಆರೋಪದಡಿ ಪೊಲೀಸರು ಇದುವರೆಗೆ 300ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.
ನೋಯ್ಡಾದ ಸೆಕ್ಟರ್ 62 ಮತ್ತು ಫೇಸ್-2 ಪ್ರದೇಶಗಳಲ್ಲಿ ಇಂದು ಬೆಳಗ್ಗೆಯೂ ಕಾರ್ಮಿಕರು ಮತ್ತು ಪೊಲೀಸರ ನಡುವೆ ಸಂಘರ್ಷ ನಡೆದಿದೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಹಿಂಸಾಚಾರದ ವಿಡಿಯೋ ತುಣುಕುಗಳನ್ನು ಆಧರಿಸಿ ದಾಂಧಲೆ ನಡೆಸಿದವರನ್ನು ಗುರುತಿಸಿರುವ ಪೊಲೀಸರು, ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ 300ಕ್ಕೂ ಹೆಚ್ಚು ಕಾರ್ಮಿಕರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ನೋಯ್ಡಾದ 500ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಕಾರ್ಖಾನೆಗಳು ಇಂದೂ ಕೂಡ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ. ಇದರಿಂದ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಉದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.








