ಲಂಡನ್:ತನ್ನ ಮುಂದಿನ ಪೀಳಿಗೆಯನ್ನು ಧೂಮಪಾನದ ವ್ಯಸನದಿಂದ ಮುಕ್ತಗೊಳಿಸಲು ಬ್ರಿಟನ್ ಸರ್ಕಾರವು ಅತ್ಯಂತ ಕಠಿಣವಾದ ಕಾನೂನನ್ನು ಜಾರಿಗೆ ತಂದಿದೆ. ಇತ್ತೀಚೆಗೆ ಬ್ರಿಟನ್ ಸಂಸತ್ತು ಅಂಗೀಕರಿಸಿರುವ ‘ತಂಬಾಕು ಮತ್ತು ವೇಪ್ಸ್ ಮಸೂದೆ’ಯ ಪ್ರಕಾರ, ಜನವರಿ 1, 2009 ಅಥವಾ ಅದರ ನಂತರ ಹುಟ್ಟಿದ ಯಾರಿಗೂ ಇನ್ಮುಂದೆ ಕಾನೂನುಬದ್ಧವಾಗಿ ಸಿಗರೇಟ್ ಅಥವಾ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ.
ಈ ಕಾನೂನಿನ ವಿಶೇಷತೆಯೆಂದರೆ, ಪ್ರತಿ ವರ್ಷ ಸಿಗರೇಟ್ ಖರೀದಿಸುವ ಕನಿಷ್ಠ ವಯಸ್ಸಿನ ಮಿತಿಯನ್ನು ಒಂದು ವರ್ಷ ಹೆಚ್ಚಿಸಲಾಗುತ್ತದೆ. ಅಂದರೆ, 2009ರ ನಂತರ ಹುಟ್ಟಿದವರು ವಯಸ್ಕರಾದರೂ ಸಹ ಅವರಿಗೆ ಬ್ರಿಟನ್‌ನಲ್ಲಿ ಸಿಗರೇಟ್ ಮಾರಾಟ ಮಾಡುವುದು ಕಾನೂನುಬಾಹಿರವಾಗಿಯೇ ಇರಲಿದೆ.
ಕೇವಲ ಸಿಗರೇಟ್ ಮಾತ್ರವಲ್ಲದೆ, ಇ-ಸಿಗರೇಟ್ ಅಥವಾ ವೇಪ್‌ಗಳ (Vapes) ಮೇಲೂ ಕಠಿಣ ನಿಯಂತ್ರಣ ಹೇರಲಾಗಿದೆ. ಮಕ್ಕಳನ್ನು ಆಕರ್ಷಿಸುವಂತಹ ವೇಪ್ ಫ್ಲೇವರ್‌ಗಳು, ಪ್ಯಾಕೇಜಿಂಗ್ ಮತ್ತು ಅವುಗಳ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ.
ಮಕ್ಕಳಿರುವ ಕಾರುಗಳು, ಆಟದ ಮೈದಾನಗಳು, ಶಾಲೆ ಮತ್ತು ಆಸ್ಪತ್ರೆಗಳ ಮುಂಭಾಗದಲ್ಲಿ ಧೂಮಪಾನ ಮತ್ತು ವೇಪಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ.
ಧೂಮಪಾನದಿಂದ ಉಂಟಾಗುವ ಕ್ಯಾನ್ಸರ್ ಮತ್ತು ಶ್ವಾಸಕೋಶದ ಕಾಯಿಲೆಗಳನ್ನು ತಡೆಗಟ್ಟುವುದು ಹಾಗೂ ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆ (NHS) ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು ಈ ಐತಿಹಾಸಿಕ ನಿರ್ಧಾರದ ಮುಖ್ಯ ಗುರಿಯಾಗಿದೆ.








