ಮೀರತ್ (ಉತ್ತರ ಪ್ರದೇಶ):ದೇಶವನ್ನೇ ಬೆಚ್ಚಿಬೀಳಿಸಿದ್ದ ಮೀರತ್‌ನ ‘ನೀಲಿ ಡ್ರಮ್’ (Blue Drum) ಭೀಕರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮುಸ್ಕಾನ್ ರಜಪೂತ್ ಮತ್ತು ಆಕೆಯ ಪ್ರಿಯಕರ ಸಾಹಿಲ್‌ನನ್ನು ಮಂಗಳವಾರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ಹೈಡ್ರಾಮಾ ನಡೆದಿದೆ. ಮೃತ ಸೌರಭ್ ರಜಪೂತ್ ಅವರ ತಾಯಿ, ತನ್ನ ಮಗನ ಕೊಲೆಗಾರ್ತಿಯನ್ನು ಕಂಡ ತಕ್ಷಣ ನ್ಯಾಯಾಲಯದ ಆವರಣದಲ್ಲೇ ಆಕ್ರೋಶ ಭರಿತರಾಗಿ ಕಿರುಚಾಡಿ ಕಣ್ಣೀರು ಹಾಕಿದ್ದಾರೆ.
ಆರೋಪಿ ಮುಸ್ಕಾನ್ ಜೈಲಿನಿಂದ ಪೊಲೀಸ್ ವಾಹನದಲ್ಲಿ ಬಂದಿಳಿಯುತ್ತಿದ್ದಂತೆ, ಅಲ್ಲಿಯೇ ಕಾಯುತ್ತಿದ್ದ ಸೌರಭ್ ತಾಯಿ ರೇಣು ದೇವಿ, “ಇವಳಿಗೆ ಗಲ್ಲು ಶಿಕ್ಷೆ ನೀಡಿ (ಫಾನ್ಸಿ ದೋ ಇಸ್ಕೋ)” ಎಂದು ಕೂಗಾಡಿದರು. “ನನ್ನ ಮಗ ಇವಳಿಗೆ ತಿಂಗಳಿಗೆ 50 ಸಾವಿರ ರೂಪಾಯಿ ನೀಡುತ್ತಿದ್ದ, ಆದರೂ ಇವಳು ಇಂತಹ ಕ್ರೂರ ಕೃತ್ಯ ಎಸಗಿದಳು” ಎಂದು ಗೋಳಾಡಿದರು.
2025ರ ಮಾರ್ಚ್‌ನಲ್ಲಿ ಮರ್ಚೆಂಟ್ ನೇವಿ ಅಧಿಕಾರಿಯಾಗಿದ್ದ ಸೌರಭ್ ರಜಪೂತ್‌ನನ್ನು ಆತನ ಪತ್ನಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಸೇರಿ ಕೊಲೆ ಮಾಡಿದ್ದರು. ನಂತರ ಶವವನ್ನು ತುಂಡು ತುಂಡಾಗಿ ಕತ್ತರಿಸಿ, ಸಿಮೆಂಟ್ ತುಂಬಿದ ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಅಡಗಿಸಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದರು.
ಸುಮಾರು 13 ತಿಂಗಳ ನಂತರ ಆರೋಪಿಗಳನ್ನು ವೈಯಕ್ತಿಕವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮುಸ್ಕಾನ್ ಜೈಲಿನಲ್ಲೇ ಹುಟ್ಟಿದ ತನ್ನ 6 ತಿಂಗಳ ಮಗುವನ್ನು ಎತ್ತಿಕೊಂಡು ಕೋರ್ಟ್‌ಗೆ ಬಂದಿದ್ದಳು. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಮುಂದೆ ಸುಮಾರು 45 ನಿಮಿಷಗಳ ಕಾಲ ವಿಚಾರಣೆ ನಡೆಯಿತು.
ಪರಿಸ್ಥಿತಿ ಉದ್ವಿಗ್ನಗೊಂಡಿದ್ದರಿಂದ ನ್ಯಾಯಾಲಯದ ಆವರಣದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮೃತರ ಕುಟುಂಬಸ್ಥರು ಮತ್ತು ಸಾರ್ವಜನಿಕರು ಆರೋಪಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.








