ನವದೆಹಲಿ: ವಿದೇಶಿ ವಿನಿಮಯ ಉಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ನೀಡಿದ ಕರೆಯ ಬೆನ್ನಲ್ಲೇ ದೇಶಾದ್ಯಂತ ಸೃಷ್ಟಿಯಾಗಿರುವ ಆತಂಕಕ್ಕೆ ಕೇಂದ್ರ ಸರ್ಕಾರ ತೆರೆ ಎಳೆದಿದೆ. “ದೇಶದಲ್ಲಿ ಇಂಧನ ಕೊರತೆಯಿಲ್ಲ, ಸಾರ್ವಜನಿಕರು ಭಯಭೀತರಾಗುವ ಅಗತ್ಯವಿಲ್ಲ” ಎಂದು ಸರ್ಕಾರ ಅಧಿಕೃತ ಸ್ಪಷ್ಟನೆ ನೀಡಿದೆ.
ಪ್ರಧಾನಿಯವರ ಕರೆ ಕೇವಲ ಜನರ ಸಂಘಟಿತ ಪಾಲ್ಗೊಳ್ಳುವಿಕೆಗಾಗಿ ನೀಡಿದ್ದೇ ಹೊರತು, ದೇಶದಲ್ಲಿ ಇಂಧನದ ತುರ್ತು ಪರಿಸ್ಥಿತಿ ಇದೆ ಎಂದಲ್ಲ. ರಾಷ್ಟ್ರೀಯ ಹಿತದೃಷ್ಟಿಯಿಂದ ಸಂಪನ್ಮೂಲಗಳ ಮಿತಬಳಕೆ ಮಾಡುವುದು ಇದರ ಉದ್ದೇಶ ಎಂದು ಸರ್ಕಾರ ವಿವರಿಸಿದೆ.
ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ನಡುವೆಯೂ ಭಾರತದ ಬಳಿ ಕನಿಷ್ಠ 60 ದಿನಗಳಿಗೆ ಸಾಕಾಗುವಷ್ಟು ಕಚ್ಚಾ ತೈಲ ಮತ್ತು ಇಂಧನ ಸಂಗ್ರಹವಿದೆ. ಹೀಗಾಗಿ ಪೆಟ್ರೋಲ್ ಬಂಕ್‌ಗಳ ಮುಂದೆ ಸಾಲು ನಿಲ್ಲುವ ಅವಶ್ಯಕತೆಯಿಲ್ಲ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಇಂಧನ ಕೊರತೆಯ ಸುಳ್ಳು ಸುದ್ದಿಗಳ ಬಗ್ಗೆ ನಿಗಾ ಇರಿಸಲಾಗಿದ್ದು, ಅಂತಹ ವದಂತಿಗಳಿಗೆ ಕಿವಿಗೊಡದಂತೆ ನಾಗರಿಕರಲ್ಲಿ ಮನವಿ ಮಾಡಲಾಗಿದೆ.








