ದಕ್ಷಿಣಕನ್ನಡ : ಬಿಜೆಪಿಯವರು ಎಷ್ಟೇ ತಿಪ್ಪರಲಾಗ ಹೊಡೆದ್ರೂ ಮತ್ತೆ ಸರ್ಕಾರ ತರೋದು ನಮಗೆ ಗೊತ್ತಿದೆ. ದಾನ ಧರ್ಮ ಮಾಡುವ ಕೈ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಬಡವರಿಗೆ ಪಂಚ ಗ್ಯಾರಂಟಿಗಳನ್ನು ನೀಡಲು ಸಾಧ್ಯವಾಗಿದೆ. ಹೀಗಾಗಿ ಬಿಜೆಪಿಯವರು ಟೀಕಿಸುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನೂತನ ಕಾಂಗ್ರೆಸ್ ಭವನಕ್ಕೆ ಶಿಲನ್ಯಾಸ ನೆರವೇರಿಸಿ ಮಾತನಾಡಿದ ಅವರು, ನಮ್ಮ ಸರ್ಕಾರವು ಗ್ಯಾರಂಟಿ ಯೋಜನೆ ತಂದಿರುವುದು ಕೇವಲ ಕಾಂಗ್ರೆಸ್‌ಗರಿಗೆ ಮಾತ್ರ ಎಂದು ಬಿಜೆಪಿಯವರು ಅಪಪ್ರಚಾರ ಮಾಡಿದ್ದರು. ಆದರೆ ಎಲ್ಲರಿಗಾಗಿ ಈ ಯೋಜನೆ ತಂದಿದ್ದೇವೆ. ಇದನ್ನು ಬಿಜೆಪಿಯವರು ಪಡೆಯುತ್ತಿದ್ದಾರೆ. ಟೀಕೆ ಮಾಡುವವರು ಯೋಜನೆ ನಮಗೆ ಬೇಡ ಎಂದು ಬಿಟ್ಟು ಕೊಡಲಿ ಎಂದು ಸವಾಲು ಹಾಕಿದರು.
ಬಿಜೆಪಿಯು ಜನರ ವೋಟು ತಡೆಯುವ ನಿಟ್ಟಿನಲ್ಲಿ ಎಸ್‌ಐಆರ್ ತರುತ್ತಿದೆ. ಈ ಮೂಲಕ ಎಸ್‌ಸಿ ಎಸ್‌ಟಿ, ಅಲ್ಪ ಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಮತವನ್ನು ತಡೆಯುವ ಕೆಲಸ ಮಾಡಲಾಗುತ್ತಿದೆ. ಪ್ರತಿ ಬೂತ್‌ಗಳಲ್ಲಿಯೂ ಇದನ್ನು ಮಾಡಲಾಗುತ್ತಿದೆ. ಇದರ ಬಗ್ಗೆ ಬಹಳ ಜಾಗೃತೆಯಾಗಿರಬೇಕು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೋರಾಟ ನಡೆಸುವ ಮಾದರಿಯಲ್ಲಿ ನಾವೂ ಇದರ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದರು.
ಮುಂದಿನ ಚುನಾವಣೆಯಲ್ಲಿ ಈ ಸರ್ಕಾರವನ್ನು ವಾಪಸ್ ಹೇಗೆ ತರಬೇಕು ಅನ್ನುವುದು ನಮಗೆ ಚೆನ್ನಾಗಿ ಗೊತ್ತಿದೆ. ಕಾರ್ಯಕರ್ತರು ನಿರಾಶೆ ಆಗಬೇಡಿ. ಬೇರೆ ಬೇರೆ ರಾಜ್ಯದ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಮುಂದಿನ ದಿನಗಳಲ್ಲಿ ದ.ಕ. ಜಿಲ್ಲೆಯಲ್ಲಿಯೂ ಕಾಂಗ್ರೆಸ್ ಪರ ವಾತಾವರಣ ಇರಲಿದೆ ಎಂದರು.








