ಹೊಸನಗರ ತಾಲೂಕಿನ ನಿಟ್ಟೂರಿನಲ್ಲಿ ಬಿಜೆಪಿ ಬೆಂಬಲಿತ ವ್ಯಕ್ತಿಯ ಸಹೋದರನೊಬ್ಬ ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಇಡೀ ದೃಶ್ಯ ಸಮೀಪದ ಹೋಟೆಲ್ ನಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಬಗ್ಗೆ ಕನ್ನಡ ನ್ಯೂಸ್ ನೌನೊಂದಿಗೆ ಮಾತನಾಡಿದ ನಿಟ್ಟೂರು ಗ್ರಾಮ ಪಂಚಾಯತಿ ಸದಸ್ಯ ನಾಗೋಡಿ ವಿಶ್ವನಾಥ್, ಸೈದಾಂತಿಕವಾಗಿ ಎದುರಿಸಲು ಆಗದವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಇದಕ್ಕೆಲ್ಲ ಹೆಸರುವುದಿಲ್ಲ. ಪೊಲೀಸರಿಗೆ ಸೂಕ್ತ ಕಾನೂನು ಕ್ರಮಕ್ಕೆ ದೂರು ನೀಡಿದ್ದೇನೆ. ದೇವರಾಜ್ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ ಎಂದರು.
ನಾನು ಕಾಂಗ್ರೆಸ್ ಪರ ವ್ಯಕ್ತಿಗೆ ಸಹಕಾರ ಸಂಘದ ಚುನಾವಣೆಯಲ್ಲಿ ಬೆಂಬಲಿಸಿದ್ದೆ. ಇದಕ್ಕೆ ಸಿಟ್ಟಾದಂತ ಬಿಜೆಪಿ ಬೆಂಬಲಿತ ವ್ಯಕ್ತಿಯ ಸಹೋದರ, ಪುಡಿ ರೌಡಿ ದೇವರಾಜ್ ಎಂಬುವವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತನಾಗಿ ದುಡಿದ ನನ್ನ ಏಳಿಗೆ ಸಹಿಸದೇ ಈ ಮಾರಣಾಂತಿಕ ಹಲ್ಲೆ ನಡೆಸಿದ್ದಾಗಿ ಹೇಳಿದರು.
ಮಾಜಿ ಶಾಸಕರೇ ಏನಿದು ನಿಮ್ಮ ಬೆಂಬಲಿಗನ ಅಟ್ಟಹಾಸ.?
ನಾಗೋಡಿ ವಿಶ್ವನಾಥ್ ಮೇಲೆ ಹಲ್ಲೆ ಮಾಡಿದ ದೇವರಾಜ್ ಬಿಜೆಪಿ ಕಾರ್ಯಕರ್ತ. ಈಗಾಗಲೇ ಹಲವು ಪ್ರಕರಣ ಈತನ ಮೇಲಿವೆ. ಮಾಜಿ ಶಾಸಕರ ಕುಮ್ಮಕ್ಕು ಈತನ ಹಿಂದಿದೆ ಎಂಬುದು ಬಲ್ಲ ಮೂಲಗಳ ಮಾಹಿತಿ. ಈ ಕಾರಣಕ್ಕೆ ಇಷ್ಟು ಮೆರೆಯುತ್ತಿದ್ದಾನೆ. ಈತನ ಗೂಂಡಾಗಿರಿಗೆ ಬ್ರೇಕ್ ಹಾಕುವಂತೆ ಜನತೆ ಒತ್ತಾಯಿಸಿದ್ದಾರೆ.
ಶಾಸಕ ಜಿಕೆಬಿಯವರೇ ನಿಮ್ಮ ಬೆಂಬಲಿಗನಿಗೆ ಏನಿದು ಮಾರಣಾಂತಿಕ ಹಲ್ಲೆ
ಸಾಗರ-ಹೊಸನಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಅಪ್ಪಟ ಅಭಿಮಾನಿ, ಕಾಂಗ್ರೆಸ್ ಸಕ್ರೀಯ ಕಾರ್ಯಕರ್ತ ನಾಗೋಡಿ ವಿಶ್ವನಾಥ್. ಇಂತಹ ಕಾಂಗ್ರೆಸ್ ಸಕ್ರೀಯ ಕಾರ್ಯಕರ್ತನ ಮೇಲೆ ಹಲ್ಲೆಯಾಗಿದೆ. ಇದು ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಗಮನಕ್ಕೆ ಬಂದಿದ್ಯ.? ಬಂದಿದ್ದರೇ ತಮ್ಮ ನಡೆ ಏನು ಎಂಬುದನ್ನು ನಿಟ್ಟೂರು ಜನತೆ ಕೇಳುತ್ತಿದ್ದಾರೆ.
ರಾಜಕೀಯ ದ್ವೇಷದ ಕಾರಣಕ್ಕೆ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ಸರಿಯಲ್ಲ. ಸೈದ್ಧಾಂತಿಕವಾಗಿ ಎದುರಿಸಿ ನಿಲ್ಲಬೇಕೇ ಹೊರತು, ಹೀಗೆ ಹಲ್ಲೆ ಮಾಡಿರುವುದು ಖಂಡನೀಯ. ಹೀಗೆ ಗೂಂಡಾಗಿರಿ ತೋರಿದ ವ್ಯಕ್ತಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿ ಎಂಬುದಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಲ್ಲದೇ ರೌಡಿಸಂ ತೋರುವ ದೇವರಾಜ್ ವಿರುದ್ಧ ರೌಡಿ ಶೀಟ್ ತೊರೆಯುವಂತೆಯೂ ಒತ್ತಾಯಿಸಿದ್ದಾರೆ.
ಹಲ್ಲೆಯನ್ನು ಖಂಡಿಸಿದ ನಿಟ್ಟೂರು ಕಾಂಗ್ರೆಸ್
ಗ್ರಾಪಂ ಸದಸ್ಯ ನಾಗೋಡಿ ವಿಶ್ವನಾಥ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಬಿಜೆಪಿ ಕಾರ್ಯಕರ್ತ ದೇವರಾಜ್ ನಡೆಯನ್ನು ನಿಟ್ಟೂರು ಕಾಂಗ್ರೆಸ್ ಖಂಡಿಸಿದೆ. ದೇವರಾಜ್ ಈಗಾಗಲೇ ಹಲವಾರು ಹಲ್ಲೆ ಪ್ರಕರಣಗಳನ್ನು ನಡೆಸಿದ್ದು ಆತನ ಗೂಂಡಾ ವರ್ತನೆ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದೆ.ಕೂಡಲೇ ದೇವರಾಜ್ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡರಾದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ,ಘಟಕದ ಅಧ್ಯಕ್ಷ ನಾಗೇಂದ್ರ ಜೋಗಿ ,ಮಂಜಪ್ಪ ಚನ್ನಪ್ಪ ,ರವಿಚನ್ನಪ್ಪ , ಉದಯ್ ಗೌರಿಕೆರೆ ,ರಾಘವೇಂದ್ರ ,ಕೊಲ್ಕಿ ನಾರಾಯಣಪ್ಪ , ಧರ್ಮೇಂದ್ರ ಸಂಪೆಕಟ್ಟೆ ಹಾಗೂ ಇನ್ನಿತರರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯ ನಾಗೋಡಿ ವಿಶ್ವನಾಥ್ ರಾಜಕೀಯ ಏಳಿಗೆಯನ್ನು ಸಹಿಸದ ಕೆಲವು ಬಂಡವಾಳಶಾಹಿಗಳ ಕುಮ್ಮಕ್ಕಿನಿಂದ ಈ ಹಲ್ಲೆ ನಡೆದಿದ್ದು ಈ ಘಟನೆಯ ಬಗ್ಗೆ ಪೊಲೀಸ್ ಇಲಾಖೆ ಸಂಪೂರ್ಣ ತನಿಖೆ ಕೈಗೊಂಡು ಗೂಂಡಾ ಪ್ರವೃತ್ತಿವುಳ್ಳವರನ್ನು ಗಡಿಪಾರು ಮಾಡಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರಿ ಪ್ರತಿಭಟನೆ ನಡೆಸಲಾಗುವುದು ಎಂದು ಹೊಸನಗರದ ಕೆಡಿಪಿ ಸದಸ್ಯರು ಹಾಗೂ ನಿಟ್ಟೂರು ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ನಾಗೇಂದ್ರ ಜೋಗಿ ಎಚ್ಚರಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ