ನವದೆಹಲಿ: ದೇಶಾದ್ಯಂತ ಕೋಲಾಹಲ ಸೃಷ್ಟಿಸಿರುವ NEET-UG 2026 ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆಯನ್ನು ಚುರುಕುಗೊಳಿಸಿರುವ ಕೇಂದ್ರೀಯ ತನಿಖಾ ದಳ (CBI), ಜೀವಶಾಸ್ತ್ರ (Biology) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದೆ.
ಪುಣೆಯಲ್ಲಿ ಪ್ರಮುಖ ಆರೋಪಿ ಮನೀಷಾ ವಾಗ್ಮರೆ ಬಂಧನ
ನೀಟ್ ಹಗರಣದ ದೇಶವ್ಯಾಪಿ ಜಾಲವನ್ನು ಬೆನ್ನಟ್ಟಿರುವ ಸಿಬಿಐ ಅಧಿಕಾರಿಗಳು, ಮಹಾರಾಷ್ಟ್ರ ಪೊಲೀಸರ ಸಹಯೋಗದೊಂದಿಗೆ ಭರ್ಜರಿ ಕಾರ್ಯಾಚರಣೆ ನಡೆಸಿ ಪುಣೆಯ ಬ್ಯೂಟಿ ಸಲೂನ್ ಮಾಲೀಕkeyಾದ ಮನೀಷಾ ವಾಗ್ಮರೆ ಎಂಬಾಕೆಯನ್ನು ಬಂಧಿಸಿದ್ದಾರೆ. ಇದರೊಂದಿಗೆ ಅಹಮದ್‌ನಗರದ (ಅಹಿಲ್ಯಾನಗರ) ಆಯುರ್ವೇದ ವೈದ್ಯ ಧನಂಜಯ್ ಲೋಖಂಡೆ ಎಂಬಾತನನ್ನೂ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜೀವಶಾಸ್ತ್ರದ ಪ್ರಶ್ನೆ ಪತ್ರಿಕೆ ಅಥವಾ ‘ಗೆಸ್ ಪೇಪರ್’ ಸೋರಿಕೆ ಹಾಗೂ ವಿತರಣೆಯ ಜಾಲದಲ್ಲಿ ಇವರಿಬ್ಬರೂ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಗಂಭೀರ ಶಂಕೆಯ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ಬಯಲಾಯ್ತು ಇಂಟರ್-ಸ್ಟೇಟ್ ನೆಟ್‌ವರ್ಕ್: ಜೈಪುರ ಟು ಪುಣೆ ಲಿಂಕ್
ಸಿಬಿಐ ತನಿಖೆಯ ಪ್ರಕಾರ, ಈ ಪೇಪರ್ ಲೀಕ್ ದಂಧೆಯು ಕೇವಲ ಒಂದು ರಾಜ್ಯಕ್ಕೆ ಸೀಮಿತವಾಗಿರದೆ ರಾಜಸ್ಥಾನ, ಹರಿಯಾಣ ಮತ್ತು ಮಹಾರಾಷ್ಟ್ರದಾದ್ಯಂತ ಹರಡಿಕೊಂಡಿದೆ. ರಾಜಸ್ಥಾನದ ಜೈಪುರದಲ್ಲಿ ಮಂಗಿಲಾಲ್ ಬಿವಾಲ್, ವಿಕಾಸ್ ಬಿವಾಲ್, ದಿನೇಶ್ ಬಿವಾಲ್ ಹಾಗೂ ಹರಿಯಾಣದ ಯಶ್ ಯಾದವ್ ಮತ್ತು ನಾಸಿಕ್‌ನ ಶುಭಂ ಖೈರ್ನಾರ್ ಎಂಬುವವರನ್ನು ಈಗಾಗಲೇ ಬಂಧಿಸಲಾಗಿದ್ದು, ಅವರನ್ನು ದೆಹಲಿಯ ವಿಶೇಷ ಸಿಬಿಐ ನ್ಯಾಯಾಲಯವು ತನಿಖೆಗಾಗಿ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ. ಈ ಆರೋಪಿಗಳ ವಿಚಾರಣೆಯ ಬೆನ್ನಲ್ಲೇ ಮಹಾರಾಷ್ಟ್ರದ ಲಿಂಕ್ ಪತ್ತೆಯಾಗಿದ್ದು, ಮನೀಷಾ ವಾಗ್ಮರೆ ಮತ್ತು ಧನಂಜಯ್ ಲೋಖಂಡೆ ಸಿಬಿಐ ಬಲೆಗೆ ಬಿದ್ದಿದ್ದಾರೆ.
ವಾಟ್ಸಾಪ್ ಪಿಡಿಎಫ್ ಮೂಲಕ ಹರಿದಾಡಿತ್ತು ಪೇಪರ್!
ಪರೀಕ್ಷೆಗೂ ಮುನ್ನವೇ ನೀಟ್ ಪ್ರಶ್ನೆ ಪತ್ರಿಕೆಯ ಹಾರ್ಡ್ ಕಾಪಿಯನ್ನು ಅಕ್ರಮವಾಗಿ ಪಡೆದುಕೊಂಡಿದ್ದ ದಂಧೆಕೋರರು, ಅದನ್ನು ಕೈಬರಹದಲ್ಲಿ ಬರೆದು, ಬಳಿಕ ಪಿಡಿಎಫ್ (PDF) ಫೈಲ್ ಆಗಿ ಪರಿವರ್ತಿಸಿ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಗ್ರೂಪ್‌ಗಳ ಮೂಲಕ ರಾಜಸ್ಥಾನದ ಸೀಕರ್ ಹಾಗೂ ಮಹಾರಾಷ್ಟ್ರದ ವಿವಿಧ ಕೋಚಿಂಗ್ ಸೆಂಟರ್‌ಗಳ ವಿದ್ಯಾರ್ಥಿಗಳಿಗೆ ತಲುಪಿಸಿದ್ದರು ಎಂಬುದು ಸಿಬಿಐ ತನಿಖೆಯಿಂದ ಬಹಿರಂಗಗೊಂಡಿದೆ. ಈ ನಕಲಿ ಜಾಲಕ್ಕಾಗಿ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಲಾಗಿರುವ ಡಿಜಿಟಲ್ ಪುರಾವೆಗಳು ಹಾಗೂ ಚಾಟ್‌ಗಳು ಅಧಿಕಾರಿಗಳಿಗೆ ಲಭ್ಯವಾಗಿವೆ.
ಮುಂದುವರಿದ ತಲಾಶ್
ಶಿಕ್ಷಣ ಸಚಿವಾಲಯದ ದೂರಿನ ಮೇರೆಗೆ ಮೇ 12 ರಂದು ಅಧಿಕೃತ ಎಫ್‌ಐಆರ್ ದಾಖಲಿಸಿಕೊಂಡಿರುವ ಸಿಬಿಐ, ದೇಶದ ಒಟ್ಟು 14ಕ್ಕೂ ಹೆಚ್ಚು ಪ್ರಮುಖ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿದೆ. ಈ ಜೀವಶಾಸ್ತ್ರ ಪತ್ರಿಕೆ ಸೋರಿಕೆಯ ಹಿಂದೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಒಳಗಿನ ಸಿಬ್ಬಂದಿ ಅಥವಾ ಯಾವುದೇ ಸರ್ಕಾರಿ ಅಧಿಕಾರಿಗಳ ಕೈವಾಡವಿದೆಯೇ ಎಂಬ ನಿಟ್ಟಿನಲ್ಲಿ ಸಿಬಿಐ ಈಗ ಮನೀಷಾ ವಾಗ್ಮರೆ ಸೇರಿದಂತೆ ಇತರೆ ಆರೋಪಿಗಳನ್ನು ಮುಖಾಮುಖಿ ಕೂರಿಸಿ ತೀವ್ರ ವಿಚಾರಣೆ ನಡೆಸುತ್ತಿದೆ.
ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಹಗರಣಕ್ಕೆ ಬಿಗ್ ಟ್ವಿಸ್ಟ್: ರಾಜಸ್ಥಾನದ ಒಂದೇ ಕುಟುಂಬ, 5 ಜನ, ಸತತ 2 ವರ್ಷ ನೀಟ್ ಪಾಸ್
ಹಿಜಾಬ್ ನಿರ್ಧಾರ ಹಿಂಪಡೆಯಿರಿ, ಬೇಸೂರು ಅಣುಸ್ಥಾವರ ಕೈಬಿಡಿ: ಸಾಗರದಲ್ಲಿ ಬಿಜೆಪಿ ಪ್ರತಿಭಟಿಸಿ ಆಗ್ರಹ








