ಹಾವೇರಿ: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ದಾಸವಾಣಿಯಂತೆ, ತನಗೆ ವಿದ್ಯೆ ಕಲಿಸಿ, ತಂದೆಯ ಸ್ಥಾನದಲ್ಲಿ ನಿಂತು ನೆರವಾದ ಗುರುವಿನ ಋಣವನ್ನು ಶಿಷ್ಯನೊಬ್ಬ ವಿಶಿಷ್ಟವಾಗಿ ತೀರಿಸಿದ್ದಾನೆ. ವರ್ಷಗಳ ಹಿಂದೆ ತನ್ನ ವಿದ್ಯಾಭ್ಯಾಸಕ್ಕೆ ಆಸರೆಯಾಗಿದ್ದ ಶಿಕ್ಷಕರ ನಿವೃತ್ತಿ ದಿನದಂದೇ ಶಿಷ್ಯನೊಬ್ಬ ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಗುರು ಭಕ್ತಿಯನ್ನು ಮೆರೆದಿದ್ದಾನೆ.
ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ನಡೆದ ಶಿಕ್ಷಕರೊಬ್ಬರ ಬೀಳ್ಕುಡುಗೆ ಸಮಾರಂಭ ಇಂತಹದೊಂದು ಅಪರೂಪದ ಹಾಗೂ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ಪ್ರೌಢಶಾಲೆಯ ಶಿಕ್ಷಕರಾದ ಸಿ.ಎಸ್. ವಸ್ತ್ರದ ಅವರು ಸೇವೆಯಿಂದ ನಿವೃತ್ತರಾಗಿದ್ದು, ಅವರ ನಿವೃತ್ತಿ ದಿನದಂದೇ ಹಳೆಯ ವಿದ್ಯಾರ್ಥಿಯೊಬ್ಬ ಪ್ರೀತಿಯಿಂದ ಕಾರನ್ನು ಉಡುಗೊರೆಯಾಗಿ ನೀಡಿದ್ದಾನೆ.
ಬಡ ವಿದ್ಯಾರ್ಥಿಗೆ ಆಸರೆಯಾಗಿದ್ದ ಗುರು:
ವರ್ಷಗಳ ಹಿಂದೆ ಆರ್ಥಿಕವಾಗಿ ಹಿಂದುಳಿದಿದ್ದ ಬಡ ವಿದ್ಯಾರ್ಥಿಯೊಬ್ಬನ ವಿದ್ಯಾಭ್ಯಾಸಕ್ಕೆ ಶಿಕ್ಷಕ ಸಿ.ಎಸ್. ವಸ್ತ್ರದ ಅವರು ಆಸರೆಯಾಗಿದ್ದರು. ತಂದೆಯ ಸ್ಥಾನದಲ್ಲಿ ನಿಂತು ಆ ವಿದ್ಯಾರ್ಥಿಯ ಶಾಲಾ ಶುಲ್ಕವನ್ನು ಭರಿಸಿ, ಆತ ಚೆನ್ನಾಗಿ ಓದುವಂತೆ ಪ್ರೋತ್ಸಾಹಿಸಿದ್ದರು. ಗುರುವಿನ ಪ್ರೋತ್ಸಾಹದಿಂದಾಗಿ ಆ ವಿದ್ಯಾರ್ಥಿ ಇಂದು ಉತ್ತಮ ಮಟ್ಟಕ್ಕೆ ಬೆಳೆದಿದ್ದಾನೆ.
ಸ್ವಿಫ್ಟ್ ಕಾರು ಉಡುಗೊರೆ:
2007ರ ಎಸ್ ಎಸ್ ಎಲ್ ಸಿ ಬ್ಯಾಚ್ ನ ವಿದ್ಯಾರ್ಥಿಯಾಗಿದ್ದ ನವೀನ್ ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಎಂಎನ್ಸಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಇವತ್ತು ನಾನು ಈ ಮಟ್ಟಕ್ಕೆ ತಲುಪಲು ನನ್ನ ಗುರುವೇ ಕಾರಣ ಎಂದು ಕೃತಜ್ಞತೆ ಸಲ್ಲಿಸಿರುವ ನವೀನ್, ತಮಗೆ ವಿದ್ಯಾಭ್ಯಾಸ ನೀಡಿದ ನೆಚ್ಚಿನ ಶಿಕ್ಷಕನಿಗೆ ಮಾರುತಿ ಸ್ವಿಫ್ಟ್ ಕಾರನ್ನು ಕೊಡುಗೆಯಾಗಿ ನೀಡಿದ್ದಾರೆ.
ರಾಜಯೋಗೇಂದ್ರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಮತ್ತು ಸಾವಿರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಈ ಕಾರಿನ ಕೀಲಿಕೈಯನ್ನು ಶಿಕ್ಷಕರಿಗೆ ಹಸ್ತಾಂತರಿಸಲಾಯಿತು. ತಮಗೆ ಶಿಷ್ಯ ನೀಡಿದ ಈ ಅಪರೂಪದ ಗೌರವ ಹಾಗೂ ಉಡುಗೊರೆಯನ್ನು ಕಂಡು ಶಿಕ್ಷಕ ಸಿ.ಎಸ್. ವಸ್ತ್ರದ ಅವರು ಭಾವುಕರಾದರು. ಗುರು-ಶಿಷ್ಯರ ಈ ಪವಿತ್ರ ಬಾಂಧವ್ಯ ಮತ್ತು ಅಪರೂಪದ ಬೀಳ್ಕುಡುಗೆ ಕಾರ್ಯಕ್ರಮ ನೆರೆದಿದ್ದವರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿತು.








