ಬೆಂಗಳೂರು : ಮೈಸೂರಿನ ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದ ಕುರಿತಂತೆ ಸಂಸದ ಪ್ರತಾಪ್ ಸಿಂಹ ಹಾಗೂ ಕೃಷ್ಣರಾಜ ಶಾಸಕ ಎಸ್,ಎ ರಾಮದಾಸ್ ಅವರಿಬ್ಬರಿಗೂ ಪರಸ್ಪರ ಕಚ್ಚಾಟ ಶುರುವಾಗಿದೆ.
ಈ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇಬ್ಬರಿಗೂ ಬಹಿರಂಗ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ನಿಮ್ಮಿಬ್ಬರ ಪರಸ್ಪರ ವೈಯಕ್ತಿಕ ಜಗಳದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯುಂಟಾಗುತ್ತದೆ. ಯಾವ ಕಾರಣಕ್ಕೂ ಇನ್ನುಮುಂದೆ ಬಹಿರಂಗವಾಗಿ ಜಗಳವಾಡಬಾರದು, ಬಹಿರಂಗ ಹೇಳಿಕೆ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.ಸರ್ಕಾರ ಒಂದು ನಿರ್ಧಾರಕ್ಕೆ ಬರುವವರೆಗೂ ಅನಗತ್ಯ ಗೊಂದಲ ಸೃಷ್ಟಿ ಮಾಡಬೇಡಿ ಎಂದು ನಳೀನ್ ಕುಮಾರ್ ಕಟೀಲ್ ಇಬ್ಬರಿಗೂ ದೂರವಾಣಿ ಮೂಲಕ ತಾಕೀತು ಮಾಡಿದ್ದಾರೆ.
ತಜ್ಞರ ಸಮಿತಿ ರಚನೆ
ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗಳಲ್ಲಿ ಬರುವ ಕೆಲವು ಪ್ರಯಾಣಿಕರ ತಂಗುದಾಣದ ಮೇಲೆ ಗುಂಬಜ್ ನಿರ್ಮಿಸಿರುವ ವಿಚಾರ ಈಗ ರಾಜಕೀಯ ಕೆಸರು ಎರಚಾಟಕ್ಕೆ ಕಾರಣವಾಗಿದೆ.
ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದ ವಿಚಾರಕ್ಕೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ತಜ್ಞರ ಸಮಿತಿ ರಚನೆ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದರು.ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ ಗುಂಬಜ್ ಮಾದರಿ ಬಸ್ ನಿಲ್ದಾಣದ ವಿವಾದದ ಕುರಿತು ನಿನ್ನೆ ಶಾಸಕರಾದ ಎಸ್ ಎ ರಾಮದಾಸ್ ಭೇಟಿಯಾಗಿ ಲಿಖಿತ ರೂಪದಲ್ಲಿ ಮನವಿ ಮಾಡಿದ್ದಾರೆ, ಸಮಿತಿ ರಚಿಸುವಂತೆ ಮನವಿ ಮಾಡಿದ್ದಾರೆ, ಆದ್ದರಿಂದ ತಜ್ಞರ ಸಮಿತಿ ರಚಿಸಲಾಗುತ್ತದೆ ಎಂದಿದ್ದಾರೆ. ಬಸ್ ನಿಲ್ದಾಣ ಪರಿಶೀಲನೆಗೆ ತಜ್ಞರ ಸಮಿತಿ ಕಳುಹಿಸುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.