ರಾಯಚೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಡಿ ಸಂಕಷ್ಟದಲ್ಲಿ ಸಿಲುಕಿದ್ದು, ಬಳಿಕ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಮುಡಾಗೆ ಎಲ್ಲ 14 ನಿವೇಶನಗಳನ್ನು ವಾಪಾಸ್ ನೀಡಿದ್ದಾರೆ. ಈ ವಿಚಾರವಾಗಿ ಸಿದ್ದರಾಮಯ್ಯ ಅವರು, ನನ್ನ ಹೆಂಡತಿ ಯಾವತ್ತು ರಾಜಕೀಯಕ್ಕೆ ಬಂದವಳಲ್ಲ, ಅಂತವಳನ್ನ ಬೀದಿಗೆ ತಂದರಲ್ಲ ಎಂದು ವಿಪಕ್ಷಗಳ ವಿರುದ್ಧ ಕಿಡಿ ಕಾರಿದ್ದಾರೆ.
ಇಂದು ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಸ್ವಾಭಿಮಾನಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ನನ್ನ ಹೆಂಡತಿ ಯಾವತ್ತು ರಾಜಕೀಯಕ್ಕೆ ಬಂದವಳು ಅಲ್ಲ. ಅಂತವಳನ್ನ ಬೀದಿಗೆ ತಂದರಲ್ಲ. ನಾನು ಏನ್ ತಪ್ಪು ಮಾಡಿದ್ದೇನೆ. ನನ್ನ ಮೇಲೆ ಕಪ್ಪು ಚುಕ್ಕಿ ಇಡಬೇಕು, ರಾಜಕೀಯವಾಗಿ ಹಣಿಯಬೇಕು. ಕುರಿ ಕಾಯುವನ ಮಗ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿಬಿಟ್ಟಲ್ಲ ಅಂತ ಹೊಟ್ಟೆ ಉರಿ ಎಂದು ವಾಗ್ದಾಳಿ ನಡೆಸಿದರು.
ಮಾನ್ವಿ ಮತಕ್ಷೇತ್ರದ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ಮಾಡಿದ್ದೇವೆ. ಹಂಪಯ್ಯ ನಾಯಕ ಶಾಸಕರಾದ ಬಳಿಕ 405 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ. ಈ ಸರ್ಕಾರ ಅಭಿವೃದ್ಧಿ ಪರವಾಗಿದೆ. ವಿರೋಧ ಪಕ್ಷಗಳು ಸುಮ್ಮನೇ ಆರೋಪ ಮಾಡುತ್ತಾರೆ. ಸರ್ಕಾರದ ಬಳಿ ದುಡ್ಡು ಇಲ್ಲ ಅಂದರೆ 1,695 ಕೋಟಿ ರೂ. ರಸ್ತೆಗೆ ಉದ್ಘಾಟನೆ ಮಾಡಲು ಆಗುತ್ತಿರಲಿಲ್ಲ. ಇದನ್ನ ಸಹಿಸಿಕೊಳ್ಳಲು ಆಗದೇ ನನ್ನ ಮೇಲೆ ಸುಳ್ಳು ಆರೋಪ ಮಾಡಲು ಶುರು ಮಾಡಿದ್ದಾರೆ.
2023ರಲ್ಲಿ ನೀವು ಆಶಿರ್ವಾದ ಮಾಡಿ 136 ಸ್ಥಾನ ನೀಡಿದ್ರಿ. ಬಿಜೆಪಿ ಯಾವಾಗಲೂ ಜನರ ಆರ್ಶಿವಾದದಿಂದ ಅಧಿಕಾರಕ್ಕೆ ಬಂದಿಲ್ಲ. ವಾಮಾಮಾರ್ಗದ ಮುಖಾಂತರವೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ನಾವು ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ದೇವರಾಜ್ ಅರಸು ಬಿಟ್ಟರೇ ನಾನು ಮಾತ್ರ ಐದು ವರ್ಷ ಪೂರ್ಣಗೊಳಿಸಿದ್ದೇನೆ. ಕರ್ನಾಟಕ ಹಸಿವು ಮುಕ್ತ ರಾಜ್ಯ ಆಗಬೇಕು ಅಂತ ಅನ್ನಭಾಗ್ಯ ಯೋಜನೆ ಮಾಡಿದೆ. ಬಡವರಿಗೆ ಅನುಕೂಲವಾಗಲಿ ಅಂತ ಇಂದಿರಾ ಕ್ಯಾಂಟೀನ್ ಮಾಡಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಏನು ಮಾಡಲಿಲ್ಲ ಎಂದರು.