ಶಿವಮೊಗ್ಗ : ವಾಲ್ಮೀಕಿ ನಿಗಮದ ಅಧಿಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೃತ ಚಂದ್ರಶೇಖರ್ ಪತ್ನಿ ಕವಿತಾ ಅವರು ಪ್ರತಿಕ್ರಿಯೆ ನೀಡಿದ್ದು, ನನ್ನ ಪತಿ ನಿಯತ್ತಿನ ನಾಯಿ ರೀತಿ ಸರ್ಕಾರದ ಕೆಲಸ ಮಾಡಿದ್ದಾರೆ.ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂದರೆ ಎಷ್ಟು ಒತ್ತಡ ಇತ್ತು ಊಹೆ ಮಾಡಿ ಎಂದು ಅವರು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒತ್ತಡ ಹಾಕಿ ನನ್ನ ಪತಿ ಜೀವ ತೆಗೆದಿದ್ದಾರೆ. ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ ಗಮನಕ್ಕೆ ಬರದೇ ಏನೋ ನಡೆದಿಲ್ಲ. ನಿರ್ದೇಶಕರ ಸಹಿ ನಕಲು ಆಗಲು ಸಾಧ್ಯವಿಲ್ಲ. ನನಗೆ ಸರ್ಕಾರದ ಮೇಲೆ ವಿಶ್ವಾಸವಿದೆ ಪತಿ ಸಾವಿಗೆ ನ್ಯಾಯ ಸಿಗಬೇಕು ಎಂದು ಶಿವಮೊಗ್ಗದಲ್ಲಿ ಮೃತ ಚಂದ್ರಶೇಖರ್ ಪತ್ನಿ ಕವಿತಾ ಹೇಳಿಕೆ ನೀಡಿದ್ದಾರೆ.
ನನ್ನ ಪತಿ ಯಾವುದೇ ತಪ್ಪು ಮಾಡಿಲ್ಲ ಲೂಟಿಯನ್ನು ಮಾಡಿಲ್ಲ. ಡೆತ್ ನೋಟ್ ನಲ್ಲಿ ಅವರು ಎಲ್ಲವನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ನನ್ನದು ಯಾವುದೇ ರೀತಿಯ ತಪ್ಪಿಲ್ಲ ಎಂದು ಉಲ್ಲೇಖ ಮಾಡಿದ್ದಾರೆ. ನನ್ನ ಪತಿ ನಿಯತ್ತಿನ ನಾಯಿ ರೀತಿ ಸರ್ಕಾರದ ಕೆಲಸ ಮಾಡಿದ್ದಾರೆ.ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂದರೆ ಎಷ್ಟು ಒತ್ತಡ ಇತ್ತು ಊಹೆ ಮಾಡಿ.
ನನ್ನ ಪತಿಯ ಮೇಲೆ ಏನು ಆರೋಪ ಮಾಡಿದ್ದಾರೆ ಎನ್ನುವುದು ಬೇಕು. ಡೆತ್ ನೋಟ್ ನಲ್ಲಿ ಮೂರು ಹೆಸರನ್ನು ಉಲ್ಲೇಖ ಮಾಡಿದ್ದಾರೆ.ಮೂರು ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು. ನನ್ನ ಪತಿಯು ಯಾವುದೇ ವಿಚಾರವನ್ನು ನನ್ನ ಬಳಿ ಹಂಚಿಕೊಂಡಿಲ್ಲ ಎಂದು ಶಿವಮೊಗ್ಗದಲ್ಲಿ ಚಂದ್ರಶೇಖರ್ ಪತ್ನಿ ಕವಿತಾ ತಿಳಿಸಿದರು.
ಘಟನೆ ಹಿನ್ನೆಲೆ?
ಬೆಂಗಳೂರಿನಲ್ಲಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಸೂಪರಿಂಡೆಂಟ್ ಚಂದ್ರಶೇಖರ್ (52) ಶಿವಮೊಗ್ಗದ ವಿನೋಬ ನಗರದ ಕೆಂಚಪ್ಪ ಲೇಔಟ್ನಲ್ಲಿರುವ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿಗಮದಲ್ಲಿ 187 ಕೋಟಿ ಹಗರಣ ನಡೆದಿತ್ತು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದೇನೆ. ಇನ್ನು ನನ್ನ ಸಾವಿಗೆ ಪದ್ಮಾನಾಭ, ಪರಶುರಾಮ್, ಶುಚಿಸ್ಮತಾ ಅಧಿಕಾರಿಗಳೇ ಕಾರಣ” ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡೆತ್ನೋಟ್ನಲ್ಲಿ ಏನಿದೆ ಆರು ಪುಟಗಳ ಡೆತ್ ನೋಟ್ನಲ್ಲಿ, ಸಚಿವರು ಮೌಖಿಕವಾಗಿ ಸೂಚನೆಯಂತೆ ವಸಂತನಗರದಲ್ಲಿರುವ ನಿಗಮದ ಯೂನಿಯ್ ಬ್ಯಾಂಕ್ ಖಾತೆಯನ್ನು ಎಂಜಿ ರಸ್ತೆಯಲ್ಲಿರುವ ಶಾಖೆಗೆ ವರ್ಗಾವಣೆ ಮಾಡಲಾಗಿದೆ. ಎಂಜಿ ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ನಿಗಮದ ಖಾತೆ ವರ್ಗಾವಣೆಯಾದ ಬಳಿಕ
ದಿನಾಂಕ 4/3/2024 ರಂದು 25 ಕೋಟಿ ದಿನಾಂಕ 6/3/2024 ರಂದು 25 ಕೋಟಿ ದಿನಾಂಕ 21/3/2024 ರಂದು 44 ಕೋಟಿ ದಿ. 21/3/2004 ರಂದು 43 ಕೋಟಿ (ರಾಜ್ಯ ಸರಕಾರದ ಖಜಾನೆಯಿಂದ ) ಹಾಗೂ 21/3/2024 ರಂದು 50 ಕೋಟಿ (ರಾಜ್ಯ ಸರಕಾರದ ಖಜಾನೆಯಿಂದ) ಒಟ್ಟು 187. 33 ಕೋಟಿ ವರ್ಗಾವಣೆ ಆಗಿದೆ.
ಎಂಜಿ ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ನ ಮುಖ್ಯ ವ್ಯವಸ್ಥಾಪಕಿ ಶುಚಿಸ್ಮತಾ ರವುಲ್ ಮತ್ತು ನಿಗಮದ ನಿರ್ದೇಶಕರ ಪಧ್ಮನಾಬ್ ಮತ್ತು ಲೆಕ್ಕಾಧಿಕಾರಿ ಪರಶುರಾಮ್ ಮೂವರು ಸೇರಿ ಕಾನೂನು ಬಾಹಿರವಾಗಿ ಸುಮಾರು 80 ರಿಂದ 85 ಕೋಟಿ ಅನುದಾನ ದುರ್ಬಳಕೆ ಮಾಡಿದ್ಧಾರೆ. ಅಂದರೆ ಸರಕಾರ ಎಸ್ಟಿ ಫಲಾನುಭವಿಳಿಗೆ ಸೇರಬೇಕಿದ್ದ ಅನುದಾನದ ದುರ್ಬಳಕೆಯಾಗಿದೆ ಎನ್ನುವುದು ಅಧೀಕಕ್ಷ ಚಂದ್ರಶೇಖರ್ ಆರೋಪವಾಗಿದೆ.