ಉತ್ತರಕನ್ನಡ : ಉತ್ತರಕನ್ನಡದಲ್ಲಿ ಭೀಕರ ಕೊಲೆ ನಡೆದಿದ್ದು, ಎರಡನೇ ಮದುವೆಯಾಗಲು ಸಿದ್ಧತೆ ನಡೆಸಿದ್ದ ವೈದ್ಯರೊಬ್ಬರ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಭಯಾನಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ನ್ಯೂ ಕೆ.ಹೆಚ್.ಬಿ. ಕಾಲೋನಿಯಲ್ಲಿ ನಡೆದಿದೆ. ಡಾ. ರಮೇಶ್ ಕಲಘುಟಕರ್ (51) ಕೊಲೆಯಾದ ಆಯುರ್ವೇದ ವೈದ್ಯ ಎಂದು ತಿಳಿದುಬಂದಿದೆ.
ಕಳೆದ ಐದು ತಿಂಗಳ ಹಿಂದಷ್ಟೇ ಕೊಲೆಯಾದ ವೈದ್ಯ ರಮೇಶ್ ಅವರ ಪತ್ನಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಸೋಮವಾರ (ಇಂದು) ಶಿರಸಿ ತಾಲೂಕಿನ ಮಂಜಗುಣಿಯಲ್ಲಿ ವೈದ್ಯ ರಮೇಶ್ ಅವರು ತಮ್ಮ ಪತ್ನಿಯ ತಂಗಿಯ ಜೊತೆಯಲ್ಲಿಯೇ ಮದುವೆ ಆಗುವವರಿದ್ದರು. ಒಬ್ಬರೇ ಇರುತ್ತಿದ್ದ ವೈದ್ಯ ರಮೇಶ್ ಮನೆಗೆ ಸಂಬಂಧಿಕರು ಬಂದಿದ್ದರು. ಈ ವೇಳೆ ಅವರು ಬಾಗಿಲು ತೆರೆದಿಲ್ಲ. ಹೀಗಾಗಿ ಬಾಗಿಲು ಒಡೆದು ತೆಗೆದಾಗ ಕೊಲೆಯಾದ ವಿಷಯ ಬೆಳಕಿಗೆ ಬಂದಿದೆ.
ಇನ್ನು, ವೈದ್ಯರ ಒಬ್ಬ ಮಗ ಬೆಂಗಳೂರಿನಲ್ಲಿ ಹಾಗೂ ಇನ್ನೋರ್ವ ಉತ್ತರ ಪ್ರದೇಶದಲ್ಲಿ ವೈದ್ಯಕೀಯ ಕೋರ್ಸ್ ಓದುತ್ತಿದ್ದಾರೆ. ಮದುವೆಯ ಕಾರಣ ಮನೆಗೆ ಬಂಗಾರದ ಆಭರಣಗಳನ್ನು ವೈದ್ಯ ರಮೇಶ್ ತಂದಿಟ್ಟಿದ್ದರು. ಅದೇ ಕೊಲೆಗೆ ಕಾರಣ ಆಗಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಶಿರಸಿ ಮಾರುಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.








