ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಂತ 50:50 ನಿವೇಶನ ಹಗರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಆರ್‌ಟಿಐ ಕಾರ್ಯಕರ್ತ ಗಂಗರಾಜು ಅವರಿಗೆ ಇ.ಡಿ. ನೋಟಿಸ್ ಜಾರಿಗೊಳಿಸಿದೆ.
ಈಗಾಗಲೇ ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸ್ನೇಹಮಯಿ ಕೃಷ್ಣ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದಾರೆ. ಬಳಿಕ ಮುಡಾದಲ್ಲಿನ ನಿವೇಶನ ಹಂಚಿಕೆ ಹಗರಣ ಸಂಬಂಧ ಗಂಗರಾಜು ಕೂಡ ಹೋರಾಟ ನಡೆಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿ ಮತ್ತೂಂದು ಭೂ ಅಕ್ರಮದ ಕುರಿತು ಆರೋಪಿಸಿದ್ದರು.
ಕೆಆರ್‌ಎಸ್ ರಸ್ತೆಯಲ್ಲಿ 20 ಗುಂಟೆ ಜಮೀನು ಖರೀದಿ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ಮೊದಲ ಪ್ರಕರಣದಲ್ಲಿ ಕೆಸರೆಯ ಸರ್ವೇ ನಂಬರ್ 462 ಮತ್ತು 464ರ 3.16 ಎಕರೆ ಭೂಮಿ ಹಾಗೂ 14 ಸೈಟ್ ವಿಚಾರದಲ್ಲಿ ದಾಖಲೆ ಬಿಡುಗಡೆ ಮಾಡಿದ್ದರು. ಹೀಗಾಗಿ ವೈಯಕ್ತಿಕ ಮಾಹಿತಿಗಳ ಜತೆಗೆ ಅಗತ್ಯ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ. ನೋಟಿಸ್ ನೀಡಿದೆ. ಈ ಹಿನ್ನೆಲೆಯಲ್ಲಿ ನಾಳೆ ಗಂಗರಾಜು ED ವಿಚಾರಣೆಗೆ ಹಾಜರಾಗಲಿ ದ್ದಾರೆ.