ನವದೆಹಲಿ: ದೇಶದಲ್ಲಿ ರಸ್ತೆ ಸುರಕ್ಷತಾ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇನ್ನು ಮುಂದೆ ಸಂಚಾರಿ ನಿಯಮ ಉಲ್ಲಂಘಿಸಿದರೆ ಕೇವಲ ದಂಡ ಪಾವತಿಸಿ ನುಣುಚಿಕೊಳ್ಳಲು ಸಾಧ್ಯವಿಲ್ಲ. ಹೊಸ ಪ್ರಸ್ತಾವನೆಯ ಪ್ರಕಾರ, ನಿಯಮ ಉಲ್ಲಂಘಿಸುವವರ ಡ್ರೈವಿಂಗ್ ಲೈಸೆನ್ಸ್ ಅನ್ನು ಮೂರು ತಿಂಗಳವರೆಗೆ ಅಮಾನತು (Suspend) ಮಾಡುವುದರ ಜೊತೆಗೆ 10,000 ರೂಪಾಯಿಗಳವರೆಗೆ ಭಾರಿ ದಂಡ ವಿಧಿಸುವ ಸಾಧ್ಯತೆಯಿದೆ.
ಜನ ವಿಶ್ವಾಸ ಬಿಲ್ 2026: ಲೋಕಸಭೆಯಲ್ಲಿ ಮಂಡನೆ
ಕೇಂದ್ರ ಸರ್ಕಾರವು ಕಳೆದ ಶುಕ್ರವಾರ ಲೋಕಸಭೆಯಲ್ಲಿ ‘ಜನ ವಿಶ್ವಾಸ (ತಿದ್ದುಪಡಿ) ಮಸೂದೆ 2026’ ಅನ್ನು ಮಂಡಿಸಿದೆ. ಸಾರ್ವಜನಿಕರಿಗೆ ಮತ್ತು ಉದ್ಯಮಿಗಳಿಗೆ ಅನಗತ್ಯ ಕಾನೂನು ಸಂಕೀರ್ಣತೆಗಳಿಂದ ಮುಕ್ತಿ ನೀಡಲು ಸುಮಾರು 717 ಹಳೆಯ ಕಾನೂನುಗಳನ್ನು ಸರಳಗೊಳಿಸುವ ಉದ್ದೇಶವನ್ನು ಈ ಬಿಲ್ ಹೊಂದಿದೆ.
ಪ್ರಮುಖ ಬದಲಾವಣೆಗಳು ಇಲ್ಲಿವೆ:
ಡ್ರೈವಿಂಗ್ ಲೈಸೆನ್ಸ್ ನಿಯಮ: ಲೈಸೆನ್ಸ್ ಅವಧಿ ಮುಗಿದ ನಂತರವೂ 30 ದಿನಗಳವರೆಗೆ ಅದನ್ನು ಮಾನ್ಯವೆಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಅವಧಿ ಮುಗಿಯುವ ಒಂದು ತಿಂಗಳು ಮೊದಲೇ ನವೀಕರಣ (Renewal) ಮಾಡಿಸಿದರೆ, ಅದರ ಹೊಸ ಅವಧಿಯು ಹಳೆಯ ಮುಕ್ತಾಯ ದಿನಾಂಕದಿಂದಲೇ ಆರಂಭವಾಗಲಿದೆ.
ಜೈಲು ಶಿಕ್ಷೆಯ ಬದಲು ದಂಡ: ಸಣ್ಣಪುಟ್ಟ ಅಪರಾಧಗಳಿಗೆ ಜೈಲು ಶಿಕ್ಷೆ ವಿಧಿಸುವ ಬದಲಾಗಿ ದಂಡದ ಮೊತ್ತವನ್ನು ಹೆಚ್ಚಿಸಲು ಬಿಲ್ನಲ್ಲಿ ಪ್ರಸ್ತಾಪಿಸಲಾಗಿದೆ. ವಿದ್ಯುತ್ ಕಾಯ್ದೆ ಸೇರಿದಂತೆ ಹಲವು ವಿಭಾಗಗಳಲ್ಲಿ ಈ ಬದಲಾವಣೆ ತರಲಾಗುತ್ತಿದೆ.
ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮ: ವಾಯು ಮಾಲಿನ್ಯ ನಿಯಮಗಳ ಉಲ್ಲಂಘನೆ ಅಥವಾ ಮಾಲಿನ್ಯ ಪ್ರಮಾಣಪತ್ರ (PUC) ಇಲ್ಲದಿದ್ದರೆ ಸದ್ಯ 10,000 ರೂ. ದಂಡವಿದೆ. ಆದರೆ ಇನ್ಮುಂದೆ ಲೈಸೆನ್ಸ್ ಅಮಾನತು ಮಾಡುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಂಚಾರಿ ಪೊಲೀಸ್ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಸರ್ಕಾರಿ ಆಸ್ತಿ ದುರುಪಯೋಗಕ್ಕೆ ಬ್ರೇಕ್: ಸರ್ಕಾರಿ ವಸತಿ ಅಥವಾ ಆವರಣಗಳಲ್ಲಿ ಅಕ್ರಮವಾಗಿ ವಾಸಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಮೊದಲ ತಿಂಗಳು ಪರವಾನಗಿ ಶುಲ್ಕದ 40 ಪಟ್ಟು ದಂಡ ಮತ್ತು ನಂತರ ಪ್ರತಿ ತಿಂಗಳು ಶೇ. 10 ರಷ್ಟು ದಂಡ ಹೆಚ್ಚಾಗಲಿದೆ.
ಬ್ರಿಟಿಷ್ ಕಾಲದ ಕಾನೂನುಗಳಿಗೆ ಮುಕ್ತಿ: ಬ್ರಿಟಿಷರ ಕಾಲದ ಹಳೆಯ ಕಾನೂನುಗಳನ್ನು ಕೈಬಿಡಲಾಗುತ್ತಿದೆ. ಉದಾಹರಣೆಗೆ, ನಿಷೇಧಿತ ಪ್ರದೇಶಗಳಲ್ಲಿ ಜಾನುವಾರುಗಳು ಪ್ರವೇಶಿಸಿದರೆ ಇದ್ದ ಜೈಲು ಶಿಕ್ಷೆಯನ್ನು ರದ್ದುಪಡಿಸಿ ದಂಡಕ್ಕೆ ಸೀಮಿತಗೊಳಿಸುವ ಯೋಜನೆಯಿದೆ.








