ಕೋಲ್ಕತ್ತಾ:ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ 2026ರ ಫಲಿತಾಂಶಗಳು ಹೊರಬಿದ್ದ ಬೆನ್ನಲ್ಲೇ ರಾಜಕೀಯ ಹೈಡ್ರಾಮಾ ಶುರುವಾಗಿದೆ. ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದರೂ, ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. “ನೈತಿಕವಾಗಿ ತೃಣಮೂಲ ಕಾಂಗ್ರೆಸ್ (TMC) ಜಯಗಳಿಸಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ.
ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೂ, ಮಮತಾ ಬ್ಯಾನರ್ಜಿ ಅವರು ತಾವು ಅಧಿಕಾರದಿಂದ ಕೆಳಗಿಳಿಯುವುದಿಲ್ಲ ಎಂದು ಹೇಳಿದ್ದಾರೆ. “ನಾನು ಈ ರೀತಿ ರಾಜೀನಾಮೆ ನೀಡುವುದಿಲ್ಲ, ನೈತಿಕವಾಗಿ ನಾವೇ ಚುನಾವಣೆಯನ್ನು ಗೆದ್ದಿದ್ದೇವೆ” ಎಂಬುದು ಅವರ ವಾದ.
ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಅವರು, ಸುಮಾರು 100 ಕ್ಷೇತ್ರಗಳಲ್ಲಿ ಗೆಲುವನ್ನು “ಕಸಿದುಕೊಳ್ಳಲಾಗಿದೆ” ಎಂದು ದೂರಿದ್ದಾರೆ. ಕೇಂದ್ರ ಪಡೆಗಳು ಮತ್ತು ಚುನಾವಣಾ ಆಯೋಗದ ವಿರುದ್ಧವೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
’ನೈತಿಕ ಜಯ’: ಅಧಿಕೃತ ಅಂಕಿಅಂಶಗಳು ಬಿಜೆಪಿಯ ಪರವಾಗಿದ್ದರೂ, ಜನರ ನೈತಿಕ ಬೆಂಬಲ ತಮಗಿದೆ ಎಂದು ಮಮತಾ ಹೇಳಿಕೊಂಡಿದ್ದಾರೆ. ಈ ಮೂಲಕ ಅವರು ತಮ್ಮ ಸೋಲನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.







