ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಕುರಿತು ಕಳೆದ ಕೆಲವು ದಿನಗಳಿಂದ ಮನೆಮಾಡಿದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. ತಮಿಳಗ ವೆಟ್ರಿ ಕಳಗಂ (TVK) ಅಧ್ಯಕ್ಷ, ನಟ ವಿಜಯ್ ಅವರಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಹಸಿರು ನಿಶಾನೆ ತೋರಿಸಿದ್ದಾರೆ.
ಲೋಕಭವನದಲ್ಲಿ ಇಂದು ರಾಜ್ಯಪಾಲರನ್ನು ಎರಡನೇ ಬಾರಿಗೆ ಭೇಟಿ ಮಾಡಿದ ವಿಜಯ್, ತಮಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ಮತ್ತು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವುದಾಗಿ ಮನವಿ ಮಾಡಿದರು. ವಿಜಯ್ ಅವರ ಮನವಿಯನ್ನು ಪುರಸ್ಕರಿಸಿದ ರಾಜ್ಯಪಾಲರು ಸರ್ಕಾರ ರಚನೆಗೆ ಅನುಮತಿ ನೀಡಿದ್ದಾರೆ.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ಭೇಟಿಯಲ್ಲಿ ರಾಜ್ಯಪಾಲರು ವಿಜಯ್ ಮುಂದೆ ಕೆಲವು ಕಠಿಣ ಪ್ರಶ್ನೆಗಳನ್ನು ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸರ್ಕಾರ ರಚನೆಗೆ 118 ಶಾಸಕರ ಬೆಂಬಲ ಅಗತ್ಯವಿದ್ದು, ಸದ್ಯ ಟಿವಿಕೆ ಹೊಂದಿರುವ 112 ಶಾಸಕರಿಂದ ಆಡಳಿತ ಹೇಗೆ ನಡೆಸುತ್ತೀರಿ? ಬಹುಮತಕ್ಕೆ ಬೇಕಾದ ಉಳಿದ ಶಾಸಕರ ಬೆಂಬಲ ಯಾವ ಪಕ್ಷಗಳಿಂದ ಸಿಗಲಿದೆ? ಇತರ ಪಕ್ಷಗಳು ಬೆಂಬಲ ನೀಡಲು ಅಧಿಕೃತವಾಗಿ ಒಪ್ಪಿಕೊಂಡಿವೆಯೇ?ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ವಿಜಯ್, ಪ್ರಮಾಣವಚನ ಸ್ವೀಕರಿಸಿದ ನಂತರ ನಿಗದಿತ ಸಮಯದಲ್ಲಿ ವಿಧಾನಸಭೆಯಲ್ಲಿ ತಮ್ಮ ಬಲ ಪ್ರದರ್ಶಿಸುವುದಾಗಿ ಭರವಸೆ ನೀಡಿದ್ದಾರೆ.
ಸಜ್ಜಾಗುತ್ತಿದೆ ಪ್ರಮಾಣವಚನ ಸ್ವೀಕಾರ ಸಮಾರಂಭ
ರಾಜ್ಯಪಾಲರಿಂದ ಅನುಮತಿ ಸಿಗುತ್ತಿದ್ದಂತೆಯೇ ವಿಜಯ್ ಅವರ ಪ್ರಮಾಣವಚನ ಸ್ವೀಕಾರಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಒಂದು ವೇಳೆ ರಾಜ್ಯಪಾಲರು ಅನುಮತಿ ನಿರಾಕರಿಸಿದ್ದರೆ, ಕಾನೂನು ಹೋರಾಟ ನಡೆಸಲು ಕೂಡ ಟಿವಿಕೆ ಸಿದ್ಧತೆ ಮಾಡಿಕೊಂಡಿತ್ತು ಎನ್ನಲಾಗಿದೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಪಕ್ಷ 108 ಸ್ಥಾನಗಳಲ್ಲಿ ಜಯಗಳಿಸಿದೆ. ವಿಜಯ್ ಅವರು ಎರಡು ಕ್ಷೇತ್ರಗಳಲ್ಲಿ ಗೆದ್ದಿರುವುದರಿಂದ, ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಲಿದ್ದಾರೆ.ಈಗಾಗಲೇ ಕಾಂಗ್ರೆಸ್ ಪಕ್ಷವು ಟಿವಿಕೆಗೆ ಬೆಂಬಲ ಘೋಷಿಸಿದೆ.ಬಹುಮತ ಸಾಬೀತುಪಡಿಸಲು ಅಗತ್ಯವಿರುವ ಇತರ ಪಕ್ಷಗಳ ಬೆಂಬಲಕ್ಕಾಗಿ ವಿಜಯ್ ತಂಡ ತೀವ್ರ ಪ್ರಯತ್ನ ನಡೆಸುತ್ತಿದೆ.ಒಟ್ಟಿನಲ್ಲಿ, ‘ದಳಪತಿ’ ವಿಜಯ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರುತ್ತಿರುವುದು ಅವರ ಅಭಿಮಾನಿಗಳಲ್ಲಿ ಮತ್ತು ತಮಿಳುನಾಡು ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.







