ಕೊಡಗು : ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ತೀವ್ರವಾಗಿ ಕೈಕೊಟ್ಟಿದ್ದು, ಕಾವೇರಿ ನದಿಯ ಒಡಲು ಸಂಪೂರ್ಣವಾಗಿ ಬರಿದಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಜೀವನದಿ ಕಾವೇರಿಯಲ್ಲಿ ನೀರಿನ ಹರಿವು ತೀರಾ ಕ್ಷೀಣಿಸಿದ್ದು, ಕೃಷ್ಣರಾಜಸಾಗರ (KRS) ಜಲಾಶಯದತ್ತ ನೀರು ಹರಿಯುತ್ತಿಲ್ಲ.
ಸಾಮಾನ್ಯವಾಗಿ ಜೂನ್ ಮೂರನೇ ವಾರದಲ್ಲಿ ಕಾವೇರಿ ನದಿಯು ಸುಮಾರು 15 ಅಡಿಗೂ ಅಧಿಕ ನೀರಿನೊಂದಿಗೆ ಭೋರ್ಗರೆದು ಹರಿಯುತ್ತಿತ್ತು. ಆದರೆ ಈ ವರ್ಷ ಕೇವಲ ಅರ್ಧದಿಂದ ಒಂದು ಅಡಿಗೆ ನೀರು ಸೀಮಿತವಾಗಿದ್ದು, ನದಿಯ ಒಡಲಿನಲ್ಲಿ ನೀರಿಗಿಂತ ಕಲ್ಲುಗಳೇ ಹೆಚ್ಚಾಗಿ ಕಾಣಿಸುತ್ತಿವೆ. ಕೊಡಗು ಮತ್ತು ಮೈಸೂರು ಗಡಿಯಲ್ಲಿರುವ ಕೊಪ್ಪ ಸೇತುವೆಯ ಬಳಿ ನೀರಿನ ಮಾಪಕದಲ್ಲಿ ತಳಮಟ್ಟದ ಸ್ಥಿತಿ ತಲುಪಿದೆ. ರಾಜ್ಯದಲ್ಲಿ ಈ ಬಾರಿ ಶೇಕಡ 60 ರಷ್ಟು ಮಳೆ ಕೊರತೆಯಾಗಿದೆ ಎಂದು ಹವಮಾನ ವರದಿಗಳು ತಿಳಿಸಿವೆ.
ನೀರಿನ ಕೊರತೆಯಿಂದಾಗಿ ಕಾವೇರಿ ಕೊಳ್ಳದ ಪ್ರದೇಶಗಳಲ್ಲಿ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ತೀವ್ರ ಪರದಾಟ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತವು, ಸದ್ಯ ಲಭ್ಯವಿರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲಾಗುವುದು ಮತ್ತು ಕೃಷಿ ಚಟುವಟಿಕೆಗಳಿಗೆ ಕಾವೇರಿ ನೀರನ್ನು ನಂಬಿಕೊಳ್ಳಬೇಡಿ ಎಂದು ರೈತರಿಗೆ ಸಂದೇಶ ರವಾನಿಸಿದೆ.
ಕೊಡಗಿನ ತಲಕಾವೇರಿಯಲ್ಲಿ ಹುಟ್ಟುವ ಕಾವೇರಿ ನದಿಯು ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ತಮಿಳುನಾಡಿನವರೆಗೂ ಲಕ್ಷಾಂತರ ಜನರ ಕುಡಿಯುವ ನೀರು ಹಾಗೂ ಕೃಷಿಗೆ ಆಧಾರವಾಗಿದೆ. ಆದರೆ ಜೂನ್ ಮತ್ತು ಜುಲೈ ತಿಂಗಳಲ್ಲಿ ಮಳೆಯಾಗದೆ ಕಾವೇರಿ ನದಿ ತುಂಬದಿದ್ದರೆ ಹಾರಂಗಿ ಮತ್ತು ಕೆಆರ್ಎಸ್ ಜಲಾಶಯಗಳು ಭರ್ತಿಯಾಗುವುದಿಲ್ಲ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಮತ್ತೆ ಕಾವೇರಿ ನೀರಿನ ವಿವಾದ ಅಥವಾ ಕಿಚ್ಚು ಉಲ್ಬಣಿಸುವ ಆತಂಕ ದಟ್ಟವಾಗಿ ಮನೆಮಾಡಿದೆ.








