ಮೈಸೂರು: ಎಂಎಲ್ ಸಿ ವಿಶ್ವನಾಥ್ ಅವರು ಕಳೆದ ಬಾರಿ ಚುನಾವಣೆಯಲ್ಲಿ 15 ಕೋಟಿ ಹಣ ಪಡೆದುಕೊಂಡಿದ್ದಾರೆ ಎಂದು ಶ್ರೀನಿವಾಸ್ ಪ್ರಸಾದ್ ಆರೋಪಿಸಿದ್ದಾರೆ.
ಆ ಹಣದಲ್ಲಿ ಕೇವಲ 4 ರಿಂದ 5 ಕೋಟಿ ಖರ್ಚು ಮಾಡಿ 10 ಕೋಟಿಯನ್ನ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಹಣದಲ್ಲಿ ಮಕ್ಕಳಿಗೆ ಪೆಟ್ರೋಲ್ ಬಂಕ್, ಬಾರ್ಗಳನ್ನ ಮಾಡಿಕೊಂಡಿದ್ದಾರೆ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಆರೋಪಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ವಿಧಾನಪರಿಷತ್ ಸದಸ್ಯ ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ವಿಶ್ವನಾಥ್ ಅವರೇ ನಾನು ಬಿಜೆಪಿ ಸೇರುತ್ತೇನೆ ಎಂದು ನನ್ನ ಮನೆಗೆ ಬಂದಿದ್ದರು.
ನಾನು ಅವರನ್ನ ಯಡಿಯೂರಪ್ಪ ಬಳಿಗೆ ಕಳುಹಿಸಿ ಮಾತನಾಡು ಎಂದು ಹೇಳಿದ್ದೆ. ಅದರಂತೆ ವಿಶ್ವನಾಥ್ ಮಾತನಾಡಿ ರಾಜೀನಾಮೆ ಕೊಟ್ಟು ಎಲ್ಲರನ್ನ ಬಾಂಬೆಗೆ ಕರೆದುಕೊಂಡು ಹೋಗಿದ್ದರು. ಆ ಸಂದರ್ಭದಲ್ಲಿ ಯಾವುದೇ ಹಣದ ವ್ಯವಹಾರ ನಡೆದಿರಲಿಲ್ಲ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಸ್ಪಷ್ಟಪಡಿಸಿದರು.