ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಕ್ರಿಯೆ ಬೆನ್ನಲ್ಲೇ, ಇದೀಗ ಅಧಿಕಾರ ಹಂಚಿಕೆಯ ಹೋರಾಟ ತೀವ್ರಗೊಂಡಿದೆ. ಆಂತರಿಕ ಗೊಂದಲಗಳು ಕೇವಲ ಸಿಎಂ ಹುದ್ದೆಗೆ ಸೀಮಿತವಾಗಿರದೆ, ಮುಂಬರುವ ಸಂಪುಟ ಪುನರ್ ರಚನೆ ಮತ್ತು ಪ್ರಮುಖ ಹುದ್ದೆಗಳಿಗಾಗಿ ಭಾರಿ ಪೈಪೋಟಿ ಆರಂಭವಾಗಿದೆ ಎಂದು ‘ಕನ್ನಡ ನ್ಯೂಸ್ ನೌ.ಕಾಂ’ ವರದಿ ಮಾಡಿದೆ.
ಪಕ್ಷದೊಳಗಿನ ಪ್ರಮುಖ ಶಕ್ತಿ ಕೇಂದ್ರಗಳು ಸಂಪುಟ ವಿಸ್ತರಣೆ, ನೂತನ ಕೆಪಿಸಿಸಿ ಅಧ್ಯಕ್ಷರ ಆಯ್ಕೆ, ರಾಜ್ಯಸಭಾ ಸೀಟುಗಳ ಹಂಚಿಕೆ ಹಾಗೂ ವಿವಿಧ ನಿಗಮ-ಮಂಡಳಿಗಳ ನೇಮಕಾತಿಗಳ ಮೇಲೆ ಕಣ್ಣಿಟ್ಟಿದ್ದು, ಹೈಕಮಾಂಡ್ ಮೇಲೆ ಒತ್ತಡ ಹೇರಲು ಸಜ್ಜಾಗಿವೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಪ್ರಸ್ತುತ ಮೂರು ಪ್ರಮುಖ ಬಣಗಳು ಸಕ್ರಿಯವಾಗಿದ್ದು, ಆ ಶಕ್ತಿ ಕೇಂದ್ರಗಳ ಸಂಪೂರ್ಣ ವಿವರ ಇಲ್ಲಿದೆ:
1. ರಾಜ್ಯ ರಾಜಕಾರಣದ 3 ಮುಖ್ಯ ಧ್ರುವಗಳು
ರಾಜ್ಯದಲ್ಲಿ ತಮಗೆ ಮತ್ತು ತಮ್ಮ ಬೆಂಬಲಿಗರಿಗೆ ಗರಿಷ್ಠ ಪ್ರಮಾಣದ ಅಧಿಕಾರ ಸಿಗುವಂತೆ ಮಾಡಲು ಹಿರಿಯ ನಾಯಕರು ಆಗಾಗ್ಗೆ ದೆಹಲಿಗೆ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ, ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಕಾಂಗ್ರೆಸ್‌ನ ಮೂರು ಶಕ್ತಿಶಾಲಿ ಧ್ರುವಗಳಾಗಿದ್ದಾರೆ. ಇವರೆಲ್ಲರೂ ತಮ್ಮದೇ ಆದ ಪ್ರತ್ಯೇಕ ರಾಜಕೀಯ ನೆಲೆ, ಜನಾಂಗೀಯ ಬೆಂಬಲ ಹಾಗೂ ಸಾಂಸ್ಥಿಕ ಪ್ರಭಾವ ಹೊಂದಿದ್ದು, ಸಹಜವಾಗಿಯೇ ಇವರ ಬೆಂಬಲಿಗರಲ್ಲಿ ಸಚಿವ ಸ್ಥಾನದ ನಿರೀಕ್ಷೆಗಳು ಹೆಚ್ಚಿವೆ.
2. ‘ಅಹಿಂದ’ ಬಲದ ಸಿದ್ದರಾಮಯ್ಯ ಬಣ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಬಲವು ‘ಅಹಿಂದ’ (ಅಲ್ಪಸಂಖ್ಯಾತರು, ಹಿಂದುಗಳಿದ ವರ್ಗಗಳು ಮತ್ತು ದಲಿತರು) ಸಾಮಾಜಿಕ ಸಮೀಕರಣದ ಗಟ್ಟಿ ನೆಲೆಯ ಮೇಲೆ ನಿಂತಿದೆ. ಸರ್ಕಾರ ಮತ್ತು ಸಂಘಟನೆಯಲ್ಲಿ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಹಿರಿಯ ನಾಯಕರ ದೊಡ್ಡ ಪಡೆಯೇ ಇದೆ.
-
ಬಣದಲ್ಲಿರುವ ಪ್ರಮುಖರು: ಕೆ.ಜೆ. ಜಾರ್ಜ್, ಎಚ್.ಸಿ. ಮಹಾದೇವಪ್ಪ, ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಬೈರತಿ ಸುರೇಶ್, ಬಿ.ಝಡ್. ಜಮೀರ್ ಅಹ್ಮದ್ ಖಾನ್, ಎಂ.ಬಿ. ಪಾಟೀಲ್, ಜಿ. ಪರಮೇಶ್ವರ ಮತ್ತು ದಿನೇಶ್ ಗುಂಡೂರಾವ್.
-
ಬಣದ ತಂತ್ರಗಾರಿಕೆ: ಮುಂಬರುವ ರಾಜಕೀಯ ನೇಮಕಾತಿಗಳು, ನಿಗಮ-ಮಂಡಳಿಗಳ ಆಯ್ಕೆ ಮತ್ತು ಮಂತ್ರಿ ಸ್ಥಾನ ನೀಡುವ ಪ್ರಕ್ರಿಯೆಗಳಲ್ಲಿ ತಮ್ಮ ಬಣದ ನಾಯಕರಿಗೆ ಹಾಗೂ ಬೆಂಬಲಿಗರಿಗೆ ಗರಿಷ್ಠ ಪ್ರಮಾಣದ ಮತ್ತು ಸಮರ್ಪಕವಾದ ಪ್ರಾತಿನಿಧ್ಯ ಸಿಗುವಂತೆ ನೋಡಿಕೊಳ್ಳಲು ಸಿದ್ದರಾಮಯ್ಯ ಬಣವು ತೆರೆಯ ಮರೆಯಲ್ಲಿ ಭಾರಿ ಕಸರತ್ತು ನಡೆಸುತ್ತಿದೆ.
3. ಸಂಘಟನಾ ಶಕ್ತಿಯ ಡಿ.ಕೆ. ಶಿವಕುಮಾರ್ ಬಣ
ಮತ್ತೊಂದೆಡೆ, ನೂತನ ಸಿಎಂ ಡಿ.ಕೆ. ಶಿವಕುಮಾರ್ ಅವರ ಪ್ರಭಾವವು ಪ್ರಾಥಮಿಕವಾಗಿ ಒಕ್ಕಲಿಗ ಸಮುದಾಯ, ಪಕ್ಷದ ಸಂಘಟನೆ ಮತ್ತು ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಕೇಂದ್ರೀಕೃತವಾಗಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತಂದ ಹೆಗ್ಗಳಿಕೆ ಹೊಂದಿರುವ ಇವರ ಬಣದಲ್ಲೂ ದೊಡ್ಡ ನಾಯಕರ ದಂಡೇ ಇದೆ.
-
ಬಣದಲ್ಲಿರುವ ಪ್ರಮುಖರು: ಎನ್.ಎ. ಹ್ಯಾರಿಸ್, ಡಾ. ರಂಗನಾಥ್, ಬಾಲಕೃಷ್ಣ, ಲಕ್ಷ್ಮಿ ಹೆಬ್ಬಾಳ್ಕರ್, ರಿಜ್ವಾನ್ ಅರ್ಷದ್, ಶಿವಗಂಗಾ ಬಸವರಾಜ್, ಚಲುವರಾಯ ಸ್ವಾಮಿ ಮತ್ತು ಇಕ್ಬಾಲ್ ಹುಸೇನ್.
-
ಬಣದ ತಂತ್ರಗಾರಿಕೆ: ಸಿಎಂ ಗದ್ದುಗೆ ಸಿಕ್ಕಿರುವ ಕಾರಣ, ಸಂಪುಟದಲ್ಲಿ ಹಾಗೂ ಕೆಪಿಸಿಸಿ ಸಂಘಟನೆಯಲ್ಲಿ ತಮ್ಮ ಆಪ್ತರಿಗೆ ಪ್ರಮುಖ ಖಾತೆ ಹಾಗೂ ಜವಾಬ್ದಾರಿಗಳನ್ನು ಕೊಡಿಸಲು ಡಿಕೆಶಿ ಬಣ ಒಲವು ತೋರುತ್ತಿದೆ.
4. ಹೈಕಮಾಂಡ್ ಕೃಪೆಯ ಮಲ್ಲಿಕಾರ್ಜುನ ಖರ್ಗೆ ಬಣ
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ದೆಹಲಿ ರಾಜಕಾರಣದಲ್ಲಿ ಬ್ಯುಸಿಯಾಗಿದ್ದರೂ, ಕರ್ನಾಟಕದ ಕಲ್ಯಾಣ-ಕರ್ನಾಟಕ ಭಾಗದಲ್ಲಿ ಹಾಗೂ ದಲಿತ ಸಮುದಾಯದ ನಾಯಕರಲ್ಲಿ ಅವರ ಹಿಡಿತ ಅಪಾರವಾಗಿದೆ. ಕಲಬುರಗಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಖರ್ಗೆ ಕುಟುಂಬದ ರಾಜಕೀಯ ಪ್ರಭಾವ ಇಂದಿಗೂ ಅತ್ಯಂತ ಪ್ರಬಲವಾಗಿದೆ.
-
ಬಣದಲ್ಲಿರುವ ಪ್ರಮುಖರು: ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ ಮತ್ತು ಶರಣ್ ಪ್ರಕಾಶ್ ಪಾಟೀಲ್.
-
ಬಣದ ತಂತ್ರಗಾರಿಕೆ: ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು ಹಾಗೂ ಹಿರಿಯ ಸಚಿವರಿಗೆ ಪ್ರಮುಖ ಖಾತೆಗಳನ್ನು ಉಳಿಸಿಕೊಳ್ಳಬೇಕು ಎನ್ನುವುದು ಈ ಬಣದ ಲೆಕ್ಕಾಚಾರವಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಮುಂದಿರುವ ಅಸಲಿ ಸವಾಲು
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಹೈಕಮಾಂಡ್ ಸಭೆಗಳಲ್ಲಿ ಸಂಪುಟ ಪುನರ್ರಚನೆ, ಹೊಸ ಕೆಪಿಸಿಸಿ ಅಧ್ಯಕ್ಷರ ಆಯ್ಕೆ, ರಾಜ್ಯಸಭಾ ಸ್ಥಾನಗಳ ಹಂಚಿಕೆ ಮತ್ತು ನಿಗಮ-ಮಂಡಳಿಗಳ ನೇಮಕಾತಿಗಳ ಕುರಿತೇ ಪ್ರಮುಖವಾಗಿ ಚರ್ಚಿಸಲಾಗಿದೆ.
ಸಮತೋಲನದ ಸವಾಲು:
ಪ್ರಸ್ತುತ ಹೈಕಮಾಂಡ್ ಎದುರಿಸುತ್ತಿರುವ ಅತಿ ದೊಡ್ಡ ಸವಾಲೆಂದರೆ, ರಾಜ್ಯದ ಈ ಮೂರು ಪ್ರಮುಖ ಶಕ್ತಿ ಕೇಂದ್ರಗಳ ನಡುವೆ ರಾಜಕೀಯ ಸಮತೋಲನವನ್ನು ಕಾಯ್ದುಕೊಳ್ಳುವುದು. ಯಾವುದೇ ಒಂದು ಬಣದಲ್ಲಿ ಅಸಮಾಧಾನ ಸ್ಫೋಟಗೊಳ್ಳದಂತೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತ ಮೂಡಿಸುವುದು ಎಐಸಿಸಿ ನಾಯಕತ್ವಕ್ಕೆ ಈಗ ಎದುರಾಗಿರುವ ಅಗ್ನಿಪರೀಕ್ಷೆಯಾಗಿದೆ.
ಈಶ್ವರ್ ಖಂಡ್ರೆಗೆ ಡಿಸಿಎಂ ಹುದ್ದೆ ನೀಡಿ: 40ಕ್ಕೂ ಹೆಚ್ಚು ಮಠಾಧಿಪತಿಗಳಿಂದ ಒತ್ತಾಯ
ನೆಚ್ಚಿನ ನಾಯಕನ ‘ಸಿಎಂ ಪಟ್ಟ’ಕ್ಕಾಗಿ 3 ವರ್ಷಗಳ ‘ತಪಸ್ಸು’: ಕೊನೆಗೂ ಫಲಿಸಿತು ‘ಡಿಕೆಶಿ ಅಭಿಮಾನಿ’ಯ ಸಂಕಲ್ಪ!








