ಬೆಂಗಳೂರು: ರಾಜ್ಯದ ಅನೇಕ ಖಾಸಗೀ ಆಸ್ಪತ್ರೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಆರೋಗ್ಯ ಯೋಜನೆಗಳನ್ನು ( Health Scheme ) ದುರುಪಯೋಗ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ ಅಂತಹ ಆಸ್ಪತ್ರೆಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂಬುದಾಗಿ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ( Farmer MLC Ramesh Babu ), ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ( CM Basavaraj Bommai ) ಪತ್ರ ಬರೆದು ಒತ್ತಾಯಿಸಿದ್ದಾರೆ.
ಈ ಕುರಿತಂತೆ ಸಿಎಂ ಬೊಮ್ಮಾಯಿಗೆ ಪತ್ರ ಬರೆದಿರುವಂತ ಅವರು, ಕೇಂದ್ರ ಸರ್ಕಾರದ ಆಯುಷ್ ಮಾನ್ ಯೋಜನೆ ಅಡಿಯಲ್ಲಿ ನೀಡುವ ಸಹಾಯಧನವನ್ನು ಕರ್ನಾಟಕದ ಹಲವಾರು ಆಸ್ಪತ್ರೆಗಳು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ರೀತಿ ದುರುಪಯೋಗ ಮಾಡಿಕೊಂಡಿರುವ ಆರೋಪಗಳು ಇರುತ್ತದೆ. ಹಲವಾರು ಖಾಸಗಿ ಆಸ್ಪತ್ರೆಗಳು ಕೋವಿಡ್ ಪರಿಸ್ಥಿತಿಯ ಸಂದರ್ಭದಲ್ಲಿ ತಪ್ಪು ಅಂಕಿ ಅಂಶಗಳನ್ನು ನೀಡಿ ಕೇಂದ್ರ ಸರ್ಕಾರದ ಯೋಜನೆಯಲ್ಲಿ ಮೋಸ ಮಾಡಿರುವ ಗುರುತರ ಆರೋಪಗಳು ಇಂದಿಗೂ ಕೇಳಿಬರುತ್ತಿದೆ ಎಂದಿದ್ದಾರೆ.
ಚಿತ್ರದುರ್ಗ ಮೂಲಕ ತುಮಕೂರು – ದಾವಣಗೆರೆ ‘ರೈಲ್ವೆ ಸಂಪರ್ಕ ಯೋಜನೆ’ ಪ್ರಾರಂಭಿಸಲು ಕ್ರಮ – ಸಿಎಂ ಬೊಮ್ಮಾಯಿ
ಹಿಂದೆ ಕರ್ನಾಟಕ ರಾಜ್ಯ ಸರ್ಕಾರದ ಯಶಸ್ವಿನಿ ಯೋಜನೆಯ ಅಡಿಯಲ್ಲಿ ನೂರಾರು ಖಾಸಗಿ ಆಸ್ಪತ್ರೆಗಳು ನೋಂದಾವಣಿ ಮಾಡಿಕೊಂಡು ರೋಗಿಗಳ ಬಳಿಯಲ್ಲಿ ಹಣ ಪಡೆದುಕೊಂಡು ನಂತರ ಸರ್ಕಾರದಲ್ಲಿ ವಿಮಾ ಯೋಜನೆಯ ಹಣ ದುರುಪಯೋಗ ಮಾಡಿಕೊಂಡ ನಿದರ್ಶನಗಳನ್ನು ನೋಡಿರುತ್ತೇವೆ. ತದನಂತರ ರಾಜ್ಯ ಸರ್ಕಾರ ಯಶಸ್ವಿನಿ ಯೋಜನೆಯನ್ನೇ ರದ್ದುಗೊಳಿಸಿತು. ಜನಸಾಮಾನ್ಯರ ಆರೋಗ್ಯದ ಕಾರಣಕ್ಕಾಗಿ ಮತ್ತು ರಾಜ್ಯ ಸರ್ಕಾರದ ವಿಮಾ ಯೋಜನೆಯ ಜಾರಿಗಾಗಿ ಕರ್ನಾಟಕದಲ್ಲಿ ಮತ್ತೆ ಯಶಸ್ವಿನಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಆದರೆ ಖಾಸಗಿ ಆಸ್ಪತ್ರೆಗಳು ಜನಸಾಮಾನ್ಯರ ಆರೋಗ್ಯಕ್ಕಿಂತ ಹಣ ಮಾಡಲು ಆದ್ಯತೆ ನೀಡುತ್ತಿರುವುದು ಕಳವಳಕಾರಿಯಾಗಿದೆ ಎಂದು ಹೇಳಿದ್ದಾರೆ.
ಇಂದಿನ ಕನ್ನಡ ಪ್ರಮುಖ ದಿನ ಪತ್ರಿಕೆ ಒಂದರಲ್ಲಿ ಕೇಂದ್ರ ಸರ್ಕಾರದ ಆಯುಷ್ ಮಾನ್ ಯೋಜನೆಯಡಿ ದೇವನಹಳ್ಳಿಯಲ್ಲಿರುವ ಖಾಸಗಿ ಆಕಾಶ್ ಆಸ್ಪತ್ರೆಗೆ ೪೧.೫೭ ಕೋಟಿ ರೂಪಾಯಿಗಳ ಗರಿಷ್ಟ ಮೊತ್ತ ಪಾವತಿಯಾಗಿರುವ ಬಗ್ಗೆ ವರದಿಯಾಗಿದ್ದು, ಸದರಿ ಆಸ್ಪತ್ರೆಗೆ ಪ್ರಭಾವಿ ಸಚಿವರ ನಂಟು ಇರುವುದಾಗಿ ಸುದ್ದಿಯಾಗಿರುತ್ತದೆ. ಅಲ್ಲದೆ ಅರೋಗ್ಯ ಇಲಾಖೆಯ ಅಧಿಕಾರಿಗಳು ಸಾರ್ವಜನಿಕ ದೂರಿನ ಮೇರೆಗೆ ಸದರಿ ಆಸ್ಪತ್ರೆಗೆ ನೋಟೀಸು ನೀಡಿರುತ್ತಾರೆ ಎಂದು ತಿಳಿಸಿದ್ದಾರೆ.
ಆರೋಗ್ಯ ಮತ್ತು ಶಿಕ್ಷಣ ಪ್ರತಿ ಸರ್ಕಾರದ ಆದ್ಯತೆಯ ಕೆಲಸವಾಗಿರುತ್ತದೆ. ಸಾಮಾಜಿಕ ಸೇವೆಯ ವರ್ಗೀಕರಣದ ಈ ವಲಯದಲ್ಲಿ ಮತ್ತೆ ಮತ್ತೆ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ನಿಮ್ಮ ಸರ್ಕಾರದ ಸಂಪುಟ ದರ್ಜೆಯ ಸಚಿವರೇ ಈ ಆಸ್ಪತ್ರೆಯ ಒಡೆತನವನ್ನು ಬೇನಾಮಿಯಾಗಿ ಹೊಂದಿರುವುದಾಗಿ ವರದಿಯಲ್ಲಿ ಬಂದಿರುತ್ತದೆ. ಒಬ್ಬ ಮುಖ್ಯಮಂತ್ರಿಗಳಾಗಿ ಬೇನಾಮಿ ವ್ಯವಹಾರಗಳನ್ನು ತಡೆಯುವುದು ಮತ್ತು ಭ್ರಷ್ಟಾಚಾರವನ್ನು ಕೊನೆಗಾಣಿಸುವುದು ನಿಮ್ಮ ಕರ್ತವ್ಯ ಆಗಿರುತ್ತದೆ. ಪ್ರಮುಖ ದಿನಪತ್ರಿಕೆಗಳಲ್ಲಿ ಮುಖಪುಟದಲ್ಲಿ ವರದಿ ಬಂದರೂ ಸರ್ಕಾರ ತನಗೆ ಸಂಬಂಧವಿಲ್ಲದ ರೀತಿ ತಟಸ್ಥವಾಗಿರುವುದು ಹಲವಾರು ಅನುಮಾನಗಳಿಗೆ ಅವಕಾಶ ಕೊಡುತ್ತದೆ ಎಂದಿದ್ದಾರೆ.
ರಾಜ್ಯ ಸರ್ಕಾರ ತನ್ನ ಕ್ರಮಗಳ ಮೂಲಕ ಇಂತಹ ಅಕ್ರಮಗಳನ್ನು ತಡೆಯಬೇಕಾಗುತ್ತದೆ. ಸಾರ್ವಜನಿಕ ಹಿತದೃಷ್ಟಿಯಿಂದ ತಾವು ಕೂಡಲೇ ಕೇಂದ್ರ ಸರ್ಕಾರದ ಆಯುಷ್ ಮಾನ್ ಯೋಜನೆ ಅಡಿಯಲ್ಲಿ ಸಹಾಯಧನ ಅಥವಾ ವಿಮಾ ಯೋಜನೆಯ ಹಣವನ್ನು ದುರುಪಯೋಗ ಪಡೆಸಿಕೊಂಡಿರುವ ಖಾಸಗಿ ಆಸ್ಪತ್ರೆಗಳ ಮೇಲೆ ತನಿಖೆ ನಡೆಸಬೇಕಾಗಿ ಕೋರುತ್ತೇನೆ. ಯಾವುದೇ ಖಾಸಗಿ ಆಸ್ಪತ್ರೆ ಆರೋಗ್ಯ ಯೋಜನೆಗಳನ್ನು ದುರುಪಯೋಗ ಮಾಡಿಕೊಂಡಿದ್ದರೆ, ಅಂತಹ ಆಸ್ಪತ್ರೆಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಮತ್ತು ಇಂತಹ ಆಸ್ಪತ್ರೆಗಳ ಆಡಳಿತ ಮಂಡಳಿಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಹಿತಾಸಕ್ತಿ ಇಟ್ಟುಕೊಂಡಿರುವ ಸಚಿವರ ಮೇಲೂ ಕಾನೂನು ಕ್ರಮ ಕೈಗೊಳ್ಳಲು ಕೋರಿದ್ದಾರೆ.