ಗದಗ: ಮಹಾ ಶಿವರಾತ್ರಿಯ ಈ ದಿನದಂದೇ ಗದಗದಲ್ಲಿ ಕಿಡಿಗೇಡಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಗದಗದಲ್ಲಿ ಶಿವಲಿಂಗ, ನಂದಿ ವಿಗ್ರಹವನ್ನು ಭಗ್ನಗೊಳಿಸಿ, ವಿರೂಪಗೊಳಿಸಿದ್ದಾರೆ.
ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಶಿಂಗಟಾಲೂರಲ್ಲಿ ಈ ಘಟನೆ ನಡೆದಿದೆ. ಶಿಂಗಟಾಲೂರು ಗ್ರಾಮದ ಹೊರ ವಲಯದಲ್ಲಿರುವಂತ ಶ್ರೀರಾಮೇಶ್ವರ ಹಾಗೂ ನಂದಿ ವಿಗ್ರಹವನ್ನು ರಾತ್ರೋ ರಾತ್ರಿ ದುಷ್ಕರ್ಮಿಗಳು ಭಗ್ನಗೊಳಿಸಿ, ಹೊಡೆದು ಹಾಕಿದ್ದಾರೆ.
ಇಂದು ಮಹಾ ಶಿವರಾತ್ರಿಯ ದಿನವಾದ ಕಾರಣ ಪೂಜೆಗೆಂದು ಅರ್ಚಕರು ದೇವಾಲಯಕ್ಕೆ ತೆರಳಿದಂತ ಸಂದರ್ಭದಲ್ಲಿ ಕೃತ್ಯ ಬೆಳಕಿಗೆ ಬಂದಿದೆ. ನಿನ್ನೆಯಷ್ಟೇ ಮಹಾ ಶಿವರಾತ್ರಿ ಪ್ರಯುಕ್ತ ದೇವಾಲಯಕ್ಕೆ ಸುಣ್ಣ-ಬಣ್ಣ ಬಳಿಯಲಾಗಿತ್ತು. ಆದರೇ ಇಂದು ಬೆಳಗ್ಗೆ ಶಿವಲಿಂಗ, ನಂದಿ ವಿಗ್ರಹವನ್ನು ವಿರೂಪಗೊಳಿಸಿದ್ದರಿಂದ ಗ್ರಾಮದಲ್ಲಿ ಉದ್ವಿಗ್ನತೆಯ ವಾತಾವರಣ ಉಂಟಾಗಿದೆ.
ಕಿಡಿಗೇಡಿಗಳ ಈ ದುಷ್ ಕೃತ್ಯವನ್ನು ಶಿಂಗಟಾಲೂರು ಗ್ರಾಮಸ್ಥರು ಖಂಡಿಸಿದ್ದಾರೆ. ಅಲ್ಲದೇ ಕಿಡಿಗೇಡಿ ಕೃತ್ಯ ಎಸಗಿದಂತ ದುಷ್ಕರ್ಮಿಗಳನ್ನು ಬಂಧಿಸುವಂತೆಯೂ ಒತ್ತಾಯಿಸಿದ್ದಾರೆ.








