ಮುಂಬೈ: ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಬಹುದೊಡ್ಡ ಸಿಹಿ ಸುದ್ದಿ ಸಿಕ್ಕಿದೆ. ಗಾಯದ ಸಮಸ್ಯೆಯಿಂದಾಗಿ ಕಳೆದ ಐದು ಪಂದ್ಯಗಳಿಂದ ಹೊರಗುಳಿದಿದ್ದ ‘ಹಿಟ್‌ಮ್ಯಾನ್’ ರೋಹಿತ್ ಶರ್ಮಾ, ಇಂದು ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಾರೆ.
ಏಪ್ರಿಲ್ 12ರಂದು ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೆ ತುತ್ತಾಗಿದ್ದ ರೋಹಿತ್ ಶರ್ಮಾ, ಸುಮಾರು 22 ದಿನಗಳ ಕಾಲ ವಿಶ್ರಾಂತಿಯಲ್ಲಿದ್ದರು. ಇಂದು ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್ ವೇಳೆ ಸ್ಟ್ಯಾಂಡ್-ಇನ್ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಅವರು ರೋಹಿತ್ ಮರಳಿರುವ ಸುದ್ದಿಯನ್ನು ಖಚಿತಪಡಿಸಿದಾಗ ಗ್ಯಾಲರಿಯಲ್ಲಿದ್ದ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಅನಾರೋಗ್ಯದ ಕಾರಣ ಇಂದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ರೋಹಿತ್ ಶರ್ಮಾ ಅವರನ್ನು ಇಂದಿನ ಪಂದ್ಯದಲ್ಲಿ ‘ಇಂಪ್ಯಾಕ್ಟ್ ಪ್ಲೇಯರ್’ ಆಗಿ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ತಂಡದ ಮೂಲಗಳು ತಿಳಿಸಿವೆ.
ಪ್ಲೇ ಆಫ್ ರೇಸ್‌ನಲ್ಲಿ ಜೀವಂತವಾಗಿರಲು ಮುಂಬೈ ಇಂಡಿಯನ್ಸ್‌ಗೆ ಇಂದಿನ ಪಂದ್ಯದಲ್ಲಿ ಗೆಲುವು ಅತ್ಯಗತ್ಯವಾಗಿದೆ.








