ಬೆಂಗಳೂರು : ಮದೀನಾ ಅಗ್ನಿ ದುರಂತದಲ್ಲಿ ಮೃತಪಟ್ಟ ಹುಬ್ಬಳ್ಳಿ ಮೂಲದ ಅಬ್ದುಲ್ ಗನಿ ಶಿರಹಟ್ಟಿ ಅವರ ಕುಟುಂಬಕ್ಕೆ ಸಚಿವ ಜಮೀರ್ ಅಹಮದ್ ಖಾನ್ ನೆರವಾಗಿದ್ದಾರೆ. ಮೃತ ಅಬ್ದುಲ್ ಗನಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಸಲು ಅವರ ಕುಟುಂಬದ ಮೂವರು ಸದಸ್ಯರು ಮದೀನಾ ಗೆ ತೆರಳಲು ವೀಸಾ ಸೇರಿದಂತೆ ವಿಮಾನ ಟಿಕೆಟ್, ಅಲ್ಲಿ ಉಳಿದುಕೊಳ್ಳಲು ಹೋಟೆಲ್ ಹಾಗೂ ಇತರೆ ವ್ಯವಸ್ಥೆ ಮಾಡಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅಬ್ದುಲ್ ಗನಿ ಅವರ ಕುಟುಂಬ ಸದಸ್ಯರಾದ ಉಮರ್ ಸಾಬ್, ಮೌಲಾ ಅಲಿ,ಮೈನುದ್ದಿನ್ ಮಖಂದರ್ ಅವರು ಮಂಗಳವಾರ ಬೆಂಗಳೂರಿಂದ ಮದೀನಾ ಗೆ ತೆರಳಿದರು. ಅಂತ್ಯಕ್ರಿಯೆ ನಂತರ ಮೂವರು ಉಮ್ರಾ ಯಾತ್ರೆ ಮಾಡಿ ವಾಪಸ್ ಬರಲು ಸಚಿವರು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಮಾರ್ಗ ಮಧ್ಯೆ ವೆಚ್ಚಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ.
ಘಟನೆ ಹಿನ್ನಲೆ ಯಲ್ಲಿ ಅಬ್ದುಲ್ ಗನಿ ಕುಟುಂಬ ಸದಸ್ಯರು ಮದೀನಾ ಗೆ ತೆರಳಲು ಸಂಕಷ್ಟ ಎದುರಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಸಚಿವರು ಖುದ್ದು ಬೆಂಗಳೂರಿಗೆ ಕರೆಸಿಕೊಂಡು ವ್ಯವಸ್ಥೆ ಮಾಡಿದರು. ಅವರ ಕುಟುಂಬಕ್ಕೆ ಬೇಕಾದ ಎಲ್ಲ ರೀತಿಯ ನೆರವು ಕಲ್ಪಿಸುವಂತೆ ಹಜ್ ಸಮಿತಿ ಕಾರ್ಯ ನಿರ್ವಹಣಾ ಧಿಕಾರಿ ಸಾರ್ಫಾರಾಜ್ ಖಾನ್ ಅವರಿಗೆ ಸೂಚನೆ ನೀಡಿದರು.








