ಬೀದರ್: ಗವಂತ ಖೂಬಾ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿರುವ ವಂಚಕ. ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ಲೂಟಿ ಮಾಡಿರುವ ಕಳ್ಳ. ಒಬ್ಬ ಕೇಂದ್ರ ಸಚಿವರಾಗಿ ಸರ್ಕಾರಕ್ಕೆ ಸುಮಾರು 25 ಕೋಟಿ ರೂಪಾಯಿ ದ್ರೋಹ ಮಾಡಿದ್ದಾರೆ. ವಂಚನೆ ಮಾಡಿದ್ದಾರೆ. ಇದನ್ನು ತಮ್ಮ ಅಫಿಡವಿಟ್ ನಲ್ಲಿ ಕೂಡ ತಪ್ಪು ಮಾಹಿತಿ ನೀಡಿದ್ದಾರೆ. ಇವರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಆಗ್ರಹಿಸಿದರು.
ಇಂದು ಬೀದರ್ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದಂತ ಅವರು, ನಿಮಗೆಲ್ಲಾ ತಿಳಿದಿರುವಂತೆ ಬೀದರ್ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ರಾಜ್ಯದಲ್ಲಿ 2ನೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ನನ್ನ ಪುತ್ರ ಸಾಗರ್ ಈಶ್ವರ್ ಖಂಡ್ರೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾನೆ. ನಾವು ಈ ಬಾರಿ ಕ್ಷೇತ್ರದ ಬಹುತೇಕ ಕಡೆಗಳಲ್ಲಿ ಪ್ರಚಾರ ಮಾಡಿದ್ದು, ಹೋದ ಕಡೆಯಲ್ಲೆಲ್ಲಾ ಅಭೂತಪೂರ್ವವಾದ ಜನ ಬೆಂಬಲ ವ್ಯಕ್ತವಾಗುತ್ತಿದೆ. ಎಲ್ಲೆಡೆ ಕಾಂಗ್ರೆಸ್ ಪರವಾದ ಅಲೆ ಕಾಣಿಸುತ್ತಿದೆ. ಈ ಎಲ್ಲ ಸುದ್ದಿಗಳನ್ನೂ ನಿಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಿದ, ಮಾಧ್ಯಮಗಳಲ್ಲಿ ಬಿತ್ತರಿಸಿದ ನಿಮಗೆಲ್ಲರಿಗೂ ನಾನು ಈ ಪತ್ರಿಕಾ ಗೋಷ್ಠಿಯಲ್ಲಿ ಧನ್ಯವಾದ ಸಲ್ಲಿಸಲು ಇಚ್ಛಿಸುತ್ತೇನೆ ಎಂದರು.
ನನ್ನ ರಾಜಕೀಯ ಅನುಭವದಲ್ಲಿ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾರ ಯಾರಿಗೆ ಮತ ಹಾಕಬೇಕು ಎಂಬುದನ್ನು ಈಗಾಗಲೇ ನಿರ್ಧರಿಸಿದ್ದಾರೆ ಎನಿಸುತ್ತಿದೆ. ಜನರ ನಾಡಿ ಮಿಡಿತ ನೋಡಿದಾಗ ಬೀದರ್ ಮತ್ತು ರಾಜ್ಯದ ಜನತೆ ಬದಲಾವಣೆ ಬಯಸುತ್ತಿದ್ದಾರೆ ಎಂಬುದು ವೇದ್ಯವಾಗುತ್ತಿದೆ ಎಂದರು.
ರಾಜ್ಯದಲ್ಲಿ ಕಳೆದ ಬಾರಿ ಅಂದರೆ 2019ರಲ್ಲಿ ಕಾಂಗ್ರೆಸ್ ಪಕ್ಷ ಒಂದೇ ಒಂದು ಸ್ಥಾನದಲ್ಲಿ ಮಾತ್ರ ಗೆದ್ದಿತ್ತು. ಅದಕ್ಕೆ ಕಾರಣಗಳೂ ನಿಮಗೆಲ್ಲರಿಗೂ ತಿಳಿದಿದೆ. ನಾವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ದೊಡ್ಡ ತಪ್ಪು ಮಾಡಿದ ಹಿನ್ನೆಲೆಯಲ್ಲಿ ಜೆಡಿಎಸ್ ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದರು, ಅದೇ ರೀತಿ ಕಾಂಗ್ರೆಸ್ ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಜೆಡಿಎಸ್ ಕಾರ್ಯಕರ್ತರೂ ಬಿಜೆಪಿಗೆ ಮತ ಹಾಕಿದರು, ಪುಲ್ವಾಮಾ ಪ್ರಭಾವವೂ ಕಳೆದ ಚುನಾವಣೆಯ ಮೇಲಿತ್ತು.
ಆದರೆ ಈ ಬಾರಿ ಜನತೆ ಬಿಜೆಪಿಯ ಸುಳ್ಳುಗಳಿಂದ, ಜನವಿರೋಧಿ, ರೈತ ವಿರೋಧಿ ನೀತಿಗಳಿಂದ ರೋಸತ್ತು ಹೋಗಿದ್ದಾರೆ. ಅದೇ ವೇಳೆ ನಮ್ಮ ಸರ್ಕಾರದ ಗ್ಯಾರಂಟಿಗಳು ಕಟ್ಟ ಕಡೆಯ ವ್ಯಕ್ತಿಗೂ ತಲುಪಿದ್ದು, ಜನರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ವಿಶ್ವಾಸ ಇಮ್ಮಡಿಯಾಗಿದೆ. ಹೀಗಾಗಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿ ಎಂದು ಅಪೇಕ್ಷೆ ಪಡುತ್ತಿದ್ದಾರೆ. ನಮ್ಮ ಪಂಚನ್ಯಾಯ ಮತ್ತು 25 ಗ್ಯಾರಂಟಿಗಳ ನಿರೀಕ್ಷೆಯಲ್ಲಿದ್ದಾರೆ ಎಂದರು.
ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ 18 ರಿಂದ 20 ಸ್ಥಾನಗಳಲ್ಲಿ ಗೆಲ್ಲುತ್ತದೆ. ಅದೇ ರೀತಿ ಬೀದರ್ ಲೋಕಸಭಾ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಈಶ್ವರ ಖಂಡ್ರೆ ಕನಿಷ್ಠ 2 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.
ಇನ್ನು ನಾನು ಕೆಲವು ಮುಖ್ಯವಾದ ವಿಚಾರಕ್ಕೆ ಬರುತ್ತೇನೆ. ನನ್ನ ಪುತ್ರ, ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಈಶ್ವರ್ ಖಂಡ್ರೆ ವಕೀಲನೇ ಅಲ್ಲ, ಬಾರ್ ಅಸೋಸಿಯೇಷನ್ ನಲ್ಲಿ ನೋಂದಣಿ ಮಾಡಿಸಿಲ್ಲ. ತಪ್ಪು ಅಫಿಡವಿಟ್ ಕೊಟ್ಟಿದ್ದಾರೆ ಎಂದೆಲ್ಲಾ ನಮ್ಮ ಪ್ರತಿಸ್ಪರ್ಧಿ ಭಗವಂತ ಖೂಬಾ ಹೇಳಿಕೆ ನೀಡುತ್ತಿದ್ದು ಅದನ್ನು ಮಾಧ್ಯಮಗಳೂ ಪ್ರಕಟಿಸಿವೆ. ಇದು ಜನರಲ್ಲಿ ಗೊಂದಲ ಮೂಡಿಸಿದೆ ಎಂದು ಹೇಳಿದರು.
ಸುಳ್ಳು ಹೇಳುವುದು ಬಿಜೆಪಿ ಜಾಯಮಾನ. ಬಿಜೆಪಿ ಅಂದರೆ ಭಾರತೀಯ ಝೂಟಾ ಪಾರ್ಟಿ. ಅದು ಸುಳ್ಳಿನ ವಿಶ್ವವಿದ್ಯಾಲಯ. ಅಲ್ಲಿ ಪದವಿ ಪಡೆದಿರುವ ಭಗವಂತ ಖೂಬಾ ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿದ್ದಾರೆ. ನನ್ನ ಬಗ್ಗೆ, ನನ್ನ ಕುಟುಂಬದ ಬಗ್ಗೆ ಮತ್ತು ನನ್ನ ಪುತ್ರನ ಪದವಿಯ ಬಗ್ಗೆಯೇ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಇವರು ಮಾಡುತ್ತಿರುವ ಯಾವುದೇ ಆರೋಪಕ್ಕೆ ಅವರ ಬಳಿ ಪುರಾವೆ ಇಲ್ಲ. ಆಧಾರ ರಹಿತ ಆರೋಪಗಳಿಗೆ ಯಾವುದೇ ಬೆಲೆ ಇರುವುದಿಲ್ಲ. 10 ವರ್ಷದಿಂದ ಸಂಸತ್ ಸದಸ್ಯರಾಗಿ, ಸಚಿವರಾಗಿರುವ ಖೂಬಾಗೆ ಬಾರ್ ಅಸೋಸಿಯೇಷನ್ ಮತ್ತು ಬಾರ್ ಕೌನ್ಸಿಲ್ ನಡುವಿನ ವ್ಯತ್ಯಾಸವೂ ಗೊತ್ತಿಲ್ಲ. ನನ್ನ ಪುತ್ರ ಬಾರ್ ಕೌನ್ಸಿಲ್ ನಲ್ಲಿ ನೋಂದಣಿ ಮಾಡಿಕೊಂಡಿರುವ ಪ್ರಮಾಣ ಪತ್ರ ಬಿಡುಗಡೆ ಮಾಡಿದ ಬಳಿಕವೂ, ಸೋಲಿನ ಭೀತಿ ಆವರಿಸಿರುವ ಕಾರಣ ಭಗವಂತ ಖೂಬಾ ಸುಳ್ಳು ಆರೋಪ ಮಾಡುವುದನ್ನು ಮುಂದುವರಿಸಿದ್ದಾರೆ ಎಂದರು.
ಭಗವಂತ ಖೂಬಾ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿರುವ ವಂಚಕ. ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ಲೂಟಿ ಮಾಡಿರುವ ಕಳ್ಳ. ಒಬ್ಬ ಕೇಂದ್ರ ಸಚಿವರಾಗಿ ಸರ್ಕಾರಕ್ಕೆ ಸುಮಾರು 25 ಕೋಟಿ ರೂಪಾಯಿ ದ್ರೋಹ ಮಾಡಿದ್ದಾರೆ. ವಂಚನೆ ಮಾಡಿದ್ದಾರೆ. ಇದನ್ನು ತಮ್ಮ ಅಫಿಡವಿಟ್ ನಲ್ಲಿ ಕೂಡ ತಪ್ಪು ಮಾಹಿತಿ ನೀಡಿದ್ದಾರೆ. ಇವರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಾನು ಖೂಬಾ ರೀತಿ ಆಧಾರ ರಹಿತ ಆರೋಪ ಮಾಡುವುದಿಲ್ಲ. ಖೂಬಾ ಅಫಿಡವಿಟ್ ನ ಪುಟ ಸಂಖ್ಯೆ 15ರ 10ನೇ ಕಾಲಂನಲ್ಲಿ liabilities that are under dispute ಕಾಲಂನಲ್ಲಿ Demand notice from Dy. Director, Dept of Mines and geology, Kalaburgi of Rs. 54,51,733 and appealed against this demand to the above said department. ಎಂದು ತಿಳಿಸಿದ್ದಾರೆ.
ಆದರೆ ಅವರಿಗೆ ದಿನಾಂಕ 18.07.2019ರಲ್ಲೇ ಅವಧಿ ಮುಗಿದಿರುವ ಕಲ್ಲುಗಣಿ ಗುತ್ತಿಗೆಯಲ್ಲಿ ಅಕ್ರಮ ಮಾಡಿ ಬಾಕಿ ರಾಜಧನ ಪಾವತಿಸುವಂತೆ ಬಿಜೆಪಿ ಸರ್ಕಾರವಿದ್ದಾಗ 2023ರಲ್ಲಿ ಖೂಬಾ ಅವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೋಟಿಸ್ ನೀಡಿದೆ. 01.07.2023ರ ನೋಟಿಸ್ ಸಂಖ್ಯೆ: ಗಭೂಇ/ಉ.ನಿ.ಕ/ಕ.ಗ.ಗು/ಬಾಕಿ/2023-24/1933ರ ರೀತ್ಯ 77ಲಕ್ಷ 49 ಸಾವಿರ 221 ರೂಪಾಯಿ ಬಾಕಿ ಪಾವತಿಸುವಂತೆ ತಿಳಿಸಲಾಗಿದೆ. ಆದರೆ ಖೂಬಾ ಕೇವಲ 54 ಲಕ್ಷ ಎಂದು ತೋರಿಸಿದ್ದಾರೆ. ಇದಾದ ಬಳಿಕ ಅಂದರೆ ಇವರ ಅಫಿಡವಿಟ್ ನಲ್ಲೇ ಪ್ರಮಾಣ ಪತ್ರದಲ್ಲೇ ಸುಳ್ಳು ಹೇಳಿದ್ದಾರೆ.
ಇನ್ನೂ ಇತ್ತೀಚಿನ ಮಾಹಿತಿ ಎಂದರೆ. ದಿನಾಂಕ 18.04.2024ಅಂದರೆ ಭಗವಂತ ಖೂಬಾ ನಾಮಪತ್ರ ಸಲ್ಲಿಸುವ ಹಿಂದಿನ ದಿನ ಇವರಿಗೆ ಉಪ ನಿರ್ದೇಶಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಲಬುರ್ಗಿ ಇವರು ನೀಡಿರುವ ನೋಟಿಸ್ ಸಂಖ್ಯೆ : ಗಭೂಇ/ಉ.ನಿ.ಕ/ಕ.ಗ.ಗು/ಸಂ-431/2024-25/136 ಜಾರಿ ಮಾಡಿದ್ದು, ಇದರಲ್ಲಿ ಭಗವಂತ ಖೂಬಾ, ತಂದೆ ಗುರುಬಸಪ್ಪ ಖೂಬಾ ಇವರು ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಚ್ಚಾ ಗ್ರಾಮದ ಸರ್ವೆ ನಂ.24/4ರಲ್ಲಿ 2 ಎಕರೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಮಾಡಲು 5 ವರ್ಷದ ಅವಧಿಗೆ ಅನುಮತಿ ಅಥವಾ ಪರವಾನಗಿ ಪಡೆದು, ಸರ್ವೆ ನಂ.24/2, ಸರ್ವೆ ನಂ.24/3, ಸರ್ವೆ ನಂ.24/5, ಸರ್ವೆ ನಂ.24/7, ಸರ್ವೆ ನಂ.24/8, ಸರ್ವೆ ನಂ.24/10, ಸರ್ವೆ ನಂ.24/5/1 ಮತ್ತು ಸರ್ವೆ ನಂ.25/1 ರಲ್ಲಿ ಒಟ್ಟು 8 ಎಕರೆಗಿಂತ ಹೆಚ್ಚಿನ ಜಮೀನಿನಲ್ಲಿ ಅನಧಿಕೃತವಾಗಿ, ಅಕ್ರಮವಾಗಿ ಗಣಿಗಾರಿಕೆ ನಡೆಸಿ ಕಲ್ಲುಗಳನ್ನು ಲೂಟಿ ಮಾಡಿರುತ್ತಾರೆ, ಅಕ್ರಮ ಸಾಗಣೆ ಮಾಡಿರುತ್ತಾರೆ ಎಂದು 25 ಕೋಟಿ 28 ಲಕ್ಷದ 93 ಸಾವಿರದ 50 ರೂಪಾಯಿ ದಂಡ ಪಾವತಿಸುವಂತೆ ನೋಟಿಸ್ ನೀಡಿದ್ದಾರೆ. ಆದರೆ ಈ ವಿಷಯವನ್ನು ಖೂಬಾ ತಮ್ಮ ಅಫಿಡವಿಟ್ ನಲ್ಲಿ ಮುಚ್ಚಿಟ್ಟಿದ್ದಾರೆ.
ಭಗವಂತ ಖೂಬಾ 25 ಕೋಟಿ ರೂಪಾಯಿ ದಂಡ ಕಟ್ಟಬೇಕು ಎಂದರೆ ಇವರು ನೂರಾರು ಕೋಟಿ ಕಲ್ಲು ಲೂಟಿ ಮಾಡಿದ್ದಾರೆ. 2 ಎಕರೆಗೆ ಅನುಮತಿ ಪಡೆದು 8 ಎಕರೆಯಲ್ಲಿ ಗಣಿಗಾರಿಕೆ ಮಾಡಿದ್ದಾರೆ. ಕೇಂದ್ರ ಸಚಿವರಾಗಿ ಸರ್ಕಾರಕ್ಕೇ ಮೋಸ ಮಾಡುವ ಇವರು ಜನರಿಗೆ ಮೋಸ ಮಾಡದೇ ಇರುತ್ತಾರೆಯೇ.. ಹೀಗೆ ಇನ್ನೂ ಯಾವ ಯಾವ ವ್ಯವಹಾರದಲ್ಲಿ ರಾಜ್ಯದ ಸಂಪತ್ತನ್ನು ಎಷ್ಟು ಲೂಟಿ ಮಾಡಿದ್ದಾರೋ ಗೊತ್ತಿಲ್ಲ. ಖೂಬಾ ಅವರೇ ಬೀದರ್ ಕ್ಷೇತ್ರಕ್ಕೆ 1 ಲಕ್ಷ ಕೋಟಿ ರೂಪಾಯಿ ಅನುದಾನ ತಂದಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಯಾವ ಬೃಹತ್ ಯೋಜನೆಯೂ ಕಣ್ಣಿಗೆ ಕಾಣುತ್ತಿಲ್ಲ. ಇದರಲ್ಲಿ ಅದೆಷ್ಟು ಕೋಟಿ ರೂಪಾಯಿ ಲೂಟಿ ಮಾಡಿದ್ದಾರೋ ಆ ದೇವರಿಗೇ ಗೊತ್ತು. ಈಗ ನೀವೇ ಹೇಳಿ ಸುಳ್ಳು ಹೇಳುತ್ತಿರೋದು ಯಾರು? ಎಂದು ಪ್ರಶ್ನಿಸಿದರು.
ಕೇಂದ್ರ ಸಚಿವರಾಗಿ ರಸ್ತೆಗುತ್ತಿಗೆಯಲ್ಲಿ, ಹೊರಗುತ್ತಿಗೆ ನೌಕರರ ಗುತ್ತಿಗೆಯಲ್ಲಿ ಹಾಗೂ ವಿವಿಧ ಕಾಮಗಾರಿಗಳನ್ನು ತಮ್ಮ ಸೋದರರು, ನೆಂಟರುಗಳಾದ ಜಗದೀಶ್ ಖೂಬಾ, ಅರುಣ್ ಖೂಬಾ ಮತ್ತು ಅಶೋಕ್ ಖೂಬಾ ಅವರಿಗೆ ವಿವಿಧ ಇಲಾಖೆಗಳ ಗುತ್ತಿಗೆ ಕೊಡಿಸಿ. ಸ್ವಜನ ಪಕ್ಷಪಾತ ಮಾಡಿ, ಅದರಲ್ಲೂ ಕೋಟಿ ಕೋಟಿ ಲೂಟಿ ಹೊಡೆದಿದ್ದಾರೆ. ಇವರು ನಿಜವಾದ ಕಲೆಕ್ಷನ್ ಏಜೆಂಟ್. ಖೂಬಾ ಬೇನಾಮಿ ಆಸ್ತಿ ಸುಮಾರು 200 ಕೋಟಿ ಅಂತ ಜನ ಮಾತನಾಡುತ್ತಿದ್ದಾರೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇನ್ನು ಸರ್ಕಾರಿ ನೌಕರರು, ವಿವಿಧ ಇಲಾಖೆಯ ಅಧಿಕಾರಿಗಳು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಚುನಾವಣೆ ದಿನಾಂಕ ಆರಂಭವಾದಾಗಿನಿಂದ ಈವರೆಗೆ ನೂರಾರು ದೂರುಗಳನ್ನು ಸಲ್ಲಿಸಿದ್ದಾರೆ. ಆದರೆ ಆ ಯಾವುದೇ ದೂರಿಗೆ ಆಧಾರ ಇಲ್ಲ. ಪುರಾವೆ, ಸಾಕ್ಷಿ, ದಾಖಲೆ ಒದಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ಅವರು ಸಲ್ಲಿಸಿದ್ದ ಬಹುತೇಕ ದೂರುಗಳನ್ನು ಕಲಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಇತ್ಯರ್ಥ ಮಾಡಿದ್ದಾರೆ ಎಂದರು.
ಸಂಸದ ಭಗವಂತ ಖೂಬಾ 10 ವರ್ಷದಲ್ಲಿ ಕೊಟ್ಟ ಕೊಡುಗೆ ಶೂನ್ಯ…
• ಕೊರೊನಾ ಕಾಲದಲ್ಲಿ ಜನರ ನೆರವಿಗೆ ಬಾರದೆ ಮನೆಯಲ್ಲಿ ಕುಳಿತು ಜವಾಬ್ದಾರಿ ಮರೆತದ್ದು ಇದೇ ಖೂಬಾ.
• ಕೇಂದ್ರದಲ್ಲಿ ಸಚಿವರಾಗಿದ್ದರೂ ಜಿಲ್ಲೆಯ ಅಭಿವೃದ್ಧಿ ಮಾಡದೆ, ತಾವು ಪ್ರತಿನಿಧಿಸುವ ಕ್ಷೇತ್ರದ ರೈತರು ಪ್ರವಾಹ, ಬರದಿಂದ ನಲುಗಿದಾಗಲೂ ನೆರವಿಗೆ ಬಾರದೆ ಈಗ ಮನೆ ಬಾಗಿಲಿಗೆ ಬರುತ್ತಿರುವುದು ಇದೇ ಸಂಸದ ಖೂಬಾ
• ಕೇಂದ್ರದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿದ್ದರೂ ಜಿಲ್ಲೆಯ ರೈತರಿಗೆ ಸಕಾಲದಲ್ಲಿ ಸಾಕಷ್ಟು ರಸಗೊಬ್ಬರ ಸಿಗಲಿಲ್ಲ. ಪ್ರಶ್ನಿಸಿದ ರೈತರಿಗೆ ಸಿಕ್ಕಿದ್ದು ಬೈಗುಳ, ಅವಮಾನ ಮಾಡಿ ಎಫ್.ಐ.ಆರ್. ಹಾಕಿಸಿದ್ದು ಇದೇ ಖೂಬಾ.
• ಲಿಂಗಾಯತ ಸಮುದಾಯಕ್ಕೆ ಏನೇನೂ ಕೊಡುಗೆ ನೀಡದ ಖೂಬಾ, ರಾಜಕೀಯ ದ್ವೇಷಕ್ಕಾಗಿ ಲಿಂಗಾಯತ ಯುವಕನ ಮೇಲೆ ದೌರ್ಜನ್ಯ ಕಾಯಿದೆಯಡಿ ಬಂಧಿಸಲು ಸಹಕರಿಸಿ ಸಮುದಾಯಕ್ಕೆ, ಸಮಾಜಕ್ಕೆ ಮಾಡಿದ್ದೆಲ್ಲಾ ಅನ್ಯಾಯ.
• ಸರ್ವಜನಾಂಗದ ಶಾಂತಿಯ ತೋಟ ಬೀದರ್ ನಲ್ಲಿ ದ್ವೇಷ ಹುಟ್ಟುಹಾಕಿದ್ದಲ್ಲದೆ, ಮನೆ ಮನೆಯಲ್ಲೂ ಜನ ಜಗಳವಾಡುವಂತೆ ಮಾಡಿದ್ದೇ ಖೂಬಾ ಸಾಧನೆ.
• ಉಪನ್ಯಾಸಕರು ಸಹಕಾರ ಕೋರಿದಾಗ, ಅಹಂಕಾರದಿಂದ ಮಾತನಾಡಿ ಗುರುಪರಂಪರೆಗೇ ಅವಮಾನ ಮಾಡಿದ್ದೂ ಇದೇ ಖೂಬಾ
• ಸಂಸದರಾಗಿ ಬೀದರ್ ಬ್ರಿಮ್ಸ್ ಆಸ್ಪತ್ರೆ ವೀಕ್ಷಣೆಗೆ ಹೋದಾಗ, ಮರು ಜೀವ ನೀಡುವ ವೈದ್ಯರನ್ನು ನಾಯಿಗೆ ಹೋಲಿಸಿ ಅವಮಾನಿಸಿದ್ದೂ ಇದೇ ಖೂಬಾ
• ಸಾರ್ವಜನಿಕ ಗಣೇಶೋತ್ಸವ ಮಾಡುವ ಯುವಕರ ಗುಂಪು ಪಟ್ಟಿ ಕೇಳಲು ಹೋದಾಗ ಕೇವಲ 100 ರೂ. ನೀಡಿ ದುರ್ವರ್ತನೆ ತೋರಿದ್ದೂ ಇದೇ ಖೂಬಾ
• ಚುನಾವಣೆ ಪೂರ್ವದಲ್ಲಿ ವಕೀಲರ ಸಂಘದವರಿಗೆ ಲಿಫ್ಟ್ ಕೆಲಸ ಮಾಡಿಕೊಡುವ ಭರವಸೆ ನೀಡಿ, ಗೆದ್ದ ಬಳಿಕ ನಾನು ಕೇಂದ್ರ ಮಂತ್ರಿ ನಿಮ್ಮ ಕೋರ್ಟ್ ಗೆ ಬಂದು ಲಿಫ್ಟ್ ಕೆಲಸ ಮಾಡಲಾ.. ಹೋಗಿ ಎಂದು ದುರಹಂಕಾರ ತೋರಿದವರು ಇದೇ ಖೂಬಾ
• ತಮ್ಮ ಸ್ವಾರ್ಥಕ್ಕಾಗಿ ಹಲವು ಯುವಕರ ಮೇಲೆ ಸುಳ್ಳು ಆರೋಪ ಹೊರಿಸಿ, ಕೇಸ್ ಹಾಕಿಸಿ ಅವರ ಭವಿಷ್ಯ ಹಾಳು ಮಾಡಿದ್ದು ಇದೇ ಖೂಬಾ.
• ರೆಡ್ಡಿ ಸಮುದಾಯದ ನಾಯಕರು ಭೇಟಿ ಮಾಡಲು ಮನೆಗೆ ಹೋದಾಗ, ಮನೆಯಲ್ಲೇ ಇದ್ದರೂ ಇಲ್ಲ ಎಂದು ಸುಳ್ಳು ಹೇಳಿ ಮತದಾರರನ್ನೇ ಮರತಿದ್ದು ಇದೇ ಖೂಬಾ
• ತಮ್ಮದೇ ಪಕ್ಷದ ಶಾಸಕ ಪ್ರಭು ಚವ್ಹಾಣ್ ಮೇಲಿನ ಸಿಟ್ಟನ್ನು ಮುಗ್ಧ ಲಂಬಾಣಿ ಜನರ ಮೇಲೆ ತೋರಿಸಿ ಅವರ ಬಗ್ಗೆ ಕೀಳಾಗಿ ಮಾತನಾಡಿದ್ದು ಇದೇ ಖೂಬಾ
• ಜನ ಮೋದಿ ನೋಡಿ ಮತ ಹಾಕುತ್ತಾರೆ. ನನಗೆ ಯಾವುದೇ ಆರ್.ಎಸ್.ಎಸ್., ಬಿಜೆಪಿ ಕಾರ್ಯಕರ್ತರ ಅವಶ್ಯಕತೆ ಇಲ್ಲ ಎಂದು ತಮ್ಮ ಗೆಲುವಿಗೆ ಸಹಕರಿಸಿದವರನ್ನೇ ಕೀಳಾಗಿ ಕಂಡು, ಹತ್ತಿದ ಏಣಿಯನ್ನು ಕಾಲಿಂದ ಒದ್ದವರು ಇದೇ ಖೂಬಾ.
• ಜಿಲ್ಲೆಯ ವಿವಿಧ ಇಲಾಖೆಗಳ ಸರ್ಕಾರಿ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಏಕವಚನದಲ್ಲಿ ಬೈದು, ದರ್ಪ ತೋರುವ ದುರಹಂಕಾರಿ ಈ ಖೂಬಾ
• ಜಿಲ್ಲೆಯ ಮಠಾಧಿಪತಿಗಳನ್ನೇ ವೇದಿಕೆಯ ಮೇಲೆ ಸಾರ್ವಜನಿಕವಾಗಿ ಅವಮಾನಿಸಿದ್ದೂ ಇದೇ ಖೂಬಾ
ಇಂತಹ ದುರಹಂಕಾರಿ, ದುರ್ವರ್ತನೆ ತೋರುವ ಭಗವಂತ ಖೂಬಾ ಬಗ್ಗೆ ಅವರ ಪಕ್ಷದವರೂ ಬೇಸತ್ತು ಹೋಗಿದ್ದಾರೆ, ನಾಯಕರೂ ಬೇಸರಗೊಂಡಿದ್ದಾರೆ. ಕ್ಷೇತ್ರದ ಮತದಾರರೂ ನಾವು ಏಕೆ ಅವರನ್ನು ಗೆಲ್ಲಿಸಿದೆವೋ ಎಂದು ಪಶ್ಚಾತ್ತಾಪ ಪಡುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಈ ಸುಳ್ಳುಗಾರ, ದುರಹಂಕಾರಿ ಭಗವಂತ ಖೂಬಾನನ್ನು ಮನೆಗೆ ಕಳುಹಿಸುವ ನಿರ್ಧಾರ ಮಾಡಿದ್ದು, ಸಾಗರ್ ಈಶ್ವರ ಖಂಡ್ರೆ ಅವರನ್ನು 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಪಾಠ ಕಲಿಸುತ್ತಾರೆ.
ಬೀದರ್ ಜಿಲ್ಲೆಯ ವಕೀಲರ ನಿಯೋಗ ಇಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಅವರನ್ನು ಭೇಟಿ ಮಾಡಿ, ಕಾಂಗ್ರೆಸ್ ಪಕ್ಷದ ವತಿಯಿಂದ ಬೀದರ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಯುವ ವಕೀಲ ಸಾಗರ್ ಈಶ್ವರ ಖಂಡ್ರೆ ಅವರಿಗೆ ತಮ್ಮ ಪೂರ್ಣ ಬೆಂಬಲ ವ್ಯಕ್ತಪಡಿಸಿದರು. ನಿಯೋಗದಲ್ಲಿ ಹಿರಿಯ ವಕೀಲರಾದ ಮಲ್ಲಿಕಾರ್ಜುನ ಜಳಕೋಟೆ, ಶರಣಪ್ಪ ಶರ್ಮಾ, ಧನರಾಜ್ ಬಿರಾದಾರ್, ಸಂಜಯ್ ಮಠಪತಿ, ಎದ್ರಿಸ್, ವಿಲ್ಸನ್, ಎ.ಆರ್. ನಿಟ್ಟೂರಕರ್ ಮೊದಲಾದವರು ಉಪಸ್ಥಿತರಿದ್ದರು.
ಫಾಕ್ಸ್ ಕಾನ್ ಕಂಪನಿಗೆ 300 ಎಕರೆ ಭೂಮಿ: ಕೆಐಎಡಿಬಿ ಸಿಇಓ ಡಾ. ಮಹೇಶ ಮಾಹಿತಿ
BREAKING : ಲೋಕಸಭಾ ಚುನಾವಣೆ : ರಾಯ್ ಬರೇಲಿ ಕ್ಷೇತ್ರದಿಂದ ‘ರಾಹುಲ್ ಗಾಂಧಿ’ ನಾಮಪತ್ರ ಸಲ್ಲಿಕೆ