ಬೆಳಗಾವಿ:ಜನರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಲು ಸಿರಿಧಾನ್ಯದ ಬಳಕೆ ಸಹಕಾರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಬೆಳಗಾವಿ ಸುವರ್ಣಸೌಧದಲ್ಲಿ ಅಂತರರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ವಾಣಿಜ್ಯ ಮೇಳದ ಪೂರ್ವಭಾವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿರಿಧಾನ್ಯದಲ್ಲಿ ಪೆÇ್ರಟೀನ್ ಹಾಗೂ ನಾರಿನ ಅಂಶ ಹೆಚ್ಚಾಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಿರಿಧಾನ್ಯ ಕೃಷಿಯನ್ನು ತೊಡಗಿಕೊಳ್ಳಬೇಕು ಎಂದರು.
ದೇಶದಲ್ಲಿ ಕರ್ನಾಟಕ ರಾಜ್ಯ ಸಿರಿಧಾನ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಸುಮಾರು 18.38 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 22.16 ಲಕ್ಷ ಟನ್ ಗಳಷ್ಟು ಸಿರಿಧಾನ್ಯವನ್ನು ರಾಜ್ಯದಲ್ಲಿ ಬೆಳೆಯಲಾಗುತ್ತಿದೆ ಎಂದು ತಿಳಿಸಿದರು.
ದೇಶ ವಿದೇಶಗಳಲ್ಲಿ ಸಿರಿಧಾನ್ಯಗಳ ಬೇಡಿಕೆ ಹೆಚ್ಚಾಗುತ್ತಿದ್ದು, ವಿಶ್ವದಲ್ಲಿ 903.61 ಲಕ್ಷ ಟನ್ ಗಳಷ್ಟು ಸಿರಿಧಾನ್ಯವನ್ನು ಬೆಳೆಯಲಾಗುತ್ತಿದೆ. ಭಾರತದಲ್ಲಿ 31.50 ರಷ್ಟು ಸಿರಿಧಾನ್ಯವನ್ನು ಬೆಳೆಯುತ್ತಿದ್ದು, ವಿಶ್ವದಲ್ಲಿ ಅತ್ಯಂತ ಹೆಚ್ಚು ಸಿರಿಧಾನ್ಯ ಬೆಳೆಯುವ ದೇಶವಾಗಿದೆ ಎಂದರು.
ಬೆಂಗಳೂರಿನ ನಗರದ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಅಂತರರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ವಾಣಿಜ್ಯ ಮೇಳವನ್ನು ಡಿಸೆಂಬರ್ 23, 24 ಮತ್ತು 25 ರಂದು ಹಮ್ಮಿಕೊಳ್ಳಲಾಗಿದ್ದು, ಮೇಳದ ಪೂರ್ವಭಾವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ, ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಡಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಅರಣ್ಯ ಸಚಿವ ಈಶ್ವರ ಖಂಡ್ರೆ, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.