ಮಂಡ್ಯ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಕೆ.ಆರ್. ನಂದಿನಿ ಅವರ ಸರ್ಕಾರಿ ಕಾರಿಗೆ ಮತ್ತೊಂದು ಕಾರು ಡಿಕ್ಕಿಯಾದ ಘಟನೆ ಮಂಡ್ಯದಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ಸಿಇಒ ಕೆ.ಆರ್. ನಂದಿನಿ ಅವರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ನಿವಾಸದ ಮುಂಭಾಗದಲ್ಲೇ ಸಂಭವಿಸಿದ ಅಪಘಾತ
ಮಂಡ್ಯ ಜಿಲ್ಲಾ ಪಂಚಾಯತ್ ಸಿಇಒ ಕೆ.ಆರ್. ನಂದಿನಿ ಅವರು ಮಧ್ಯಾಹ್ನ ಊಟ ಮುಗಿಸಿ ಕಚೇರಿಗೆ ಹೊರಡುತ್ತಿದ್ದರು. ಈ ವೇಳೆ ಅವರ ಸರ್ಕಾರಿ ನಿವಾಸದ ಮುಂಭಾಗದಲ್ಲೇ ಮತ್ತೊಂದು ಕಾರು ಇವರ ಅಧಿಕೃತ ಸರ್ಕಾರಿ ವಾಹನಕ್ಕೆ ರಭಸವಾಗಿ ಬಂದು ಡಿಕ್ಕಿ ಹೊಡೆದಿದೆ.
ಟೈರ್ ಸ್ಫೋಟ, ಜಖಂಗೊಂಡ ಸರ್ಕಾರಿ ಕಾರು
ಅಪಘಾತದ ರಭಸ ಎಷ್ಟಿತ್ತೆಂದರೆ ಜಿ.ಪಂ. ಸಿಇಒ ಅವರ ಕಾರಿನ ಟೈರ್ ಸ್ಥಳದಲ್ಲೇ ಸ್ಫೋಟಗೊಂಡಿದೆ. ಡಿಕ್ಕಿಯ ಹೊಡೆತಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತಾದರೂ, ಅಧಿಕಾರಿ ನಂದಿನಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮತ್ತೊಂದು ಕಾರಿನಲ್ಲಿ ಕಚೇರಿಗೆ ತೆರಳಿದ ಸಿಇಒ
ಘಟನೆ ನಡೆದ ತಕ್ಷಣವೇ ಸಾವರಿಸಿಕೊಂಡ ಸಿಇಒ ಕೆ.ಆರ್. ನಂದಿನಿ ಅವರು, ಜಖಂಗೊಂಡಿದ್ದ ವಾಹನದಿಂದ ಇಳಿದು ಬಳಿಕ ಮತ್ತೊಂದು ಪರ್ಯಾಯ ಕಾರಿನ ವ್ಯವಸ್ಥೆ ಮಾಡಿಕೊಂಡು ತಮ್ಮ ಕಚೇರಿ ಕೆಲಸಕ್ಕೆ ತೆರಳಿದ್ದಾರೆ. ಈ ಅಪಘಾತಕ್ಕೆ ಸಂಬಂಧಿಸಿದಂತೆ ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.








