ಮಂಡ್ಯ : ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಶಿಕ್ಷಕನೇ ಈ ಕೃತ್ಯ ಎಸಗಿದ್ದಾನೆ ಎಂಬುದು ಸಾಭೀತಾಗಿದೆ.
ಬಾಲಕಿಯನ್ನು ಟ್ಯೂಷನ್ ಗೆ ಕರೆಸಿಕೊಂಡ ಶಿಕ್ಷಕ ನಂತರ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಸಾಭೀತಾಗಿದೆ. ಬಂಧಿತ ಶಿಕ್ಷಕನನ್ನು ಕಾಂತ್ ರಾಜ್ ಎಂದು ಗುರುತಿಸಲಾಗಿದೆ. ಟ್ಯೂಷನ್ ಗೆ ಬಂದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ನಂತರ ಪೋಷಕರಿಗೆ ಗೊತ್ತಾದರೆ ಅಪಾಯ ಎಂದು ಭಾವಿಸಿದ ಈತ ಬಾಲಕಿ ತಲೆಗೆ ರಾಡ್ ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ , ಬಳಿಕ ಸಂಪ್ ಗೆ ಎಸೆದಿದ್ದಾನೆ ಎಂದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಐಪಿಸಿ 302 ಹಾಗೂ ಪೋಕ್ಸೋ ಕಾಯಿದೆಯಡಿ ಆರೋಪಿಯನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.
ಮೈಸೂರು ರಸ್ತೆಯ ಮಯೂರ ಬೇಕರಿ ಹಿಂಭಾಗದ ನಿರ್ಮಾಣ ಹಂತದ ಮನೆಯ ಕಟ್ಟಡದಲ್ಲಿ 10 ವರ್ಷದ ವಿದ್ಯಾರ್ಥಿನಿ ಶವ ಪತ್ತೆಯಾಗಿತ್ತು. ಮಂಗಳವಾರ ಬೆಳಗ್ಗೆ ಟ್ಯೂಷನ್ ಗಾಗಿ ಮನೆಯಿಂದ ಹೋಗಿದ್ದ ವಿದ್ಯಾರ್ಥಿನಿ ಬಳಿಕ ಮನೆಗೆ ವಾಪಸ್ ಬಂದಿರಲಿಲ್ಲ. ನಂತರ ಮೈಸೂರು ರಸ್ತೆಯ ಮಯೂರ ಬೇಕರಿ ಹಿಂಭಾಗದ ನಿರ್ಮಾಣ ಹಂತದ ಕಟ್ಟಡದ ಸಮೀಪದಲ್ಲಿ ಪರಿಶೀಲಿಸಿದಾಗ ನೀರಿನ ಸಂಪ್ ಒಳಗೆ ಬಾಲಕಿಯ ಶವ ಪತ್ತೆಯಾಗಿತ್ತು. ಟ್ಯೂಷನ್ ಕೇಂದ್ರದ ಉಸ್ತುವಾರಿ ಶಿಕ್ಷಕನೇ ಈ ಕೃತ್ಯ ಎಸಗಿರುವುದು ಸಾಭೀತಾಗಿದೆ.
ಟ್ಯೂಶನ್ ಗೆ ಬಂದ 10 ವರ್ಷದ ಶಾಲಾ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ಹಾಗೂ ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.